ಮಂಡ್ಯ: ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಪ್ರಕರಣ ಸಂಬಂಧ ಜಿಲ್ಲೆಯ ಪಾಂಡವಪುರ, ಬೆಳ್ಳೂರು ಮತ್ತು ಮೇಲುಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಬನ್ನೂರಿನವರಾದ ರಾಮಕೃಷ್ಣ, ಗುರು, ಮೈಸೂರಿನ ಸೋಮಶೇಖರ್, ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮದ ನವೀನ್ ಹೆಚ್.ಕೆ. ಕೆ.ಆರ್.ನಗರದ ಶಂಕರ ಜಿ.ಎನ್ ಮತ್ತು ಪಾಂಡವಪುರ ತಾಲೂಕಿನ ಹರಳಹಳ್ಳಿಯ ಜಬ್ಬರ್ ಬಂಧಿತ ಆರೋಪಿಗಳು.
ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಎಸ್ ಬಾಲದಂಡಿ ಮಾತನಾಡಿ, ಭ್ರೂಣ ಪತ್ತೆ ಮತ್ತು ಹತ್ಯೆ ಸಂಬಂಧ ಪಾಂಡವಪುರ, ಬೆಳ್ಳೂರು ಮತ್ತು ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಈಗ ಮತ್ತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ರಾಮಕೃಷ್ಣ, ಗುರು, ಸೋಮಶೇಖರ್ ಮೈಸೂರು ಭಾಗದಲ್ಲಿ ಕಾರ್ಯನಿರ್ವಹಿಸುತ್ತಾ ಗರ್ಭಪಾತ ಮಾಡ್ತಿದ್ರು. ಆರೋಪಿ ರಾಮಕೃಷ್ಣ ಬಳಿಯಿಂದ ಎರಡು ಸ್ಕ್ಯಾನಿಂಗ್ ಮಷಿನ್ ವಶಕ್ಕೆ ಪಡೆಯಲಾಗಿದೆ. ಒಂದು ವರ್ಷದಲ್ಲಿ 36 ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಪ್ರಕರಣದ ಬಗ್ಗೆ ಶಾಸಕರು ಹೇಳಿದ್ದಿಷ್ಟು: ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, "ದುದ್ದ ವ್ಯಾಪ್ತಿಯಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆಯಾಗಿತ್ತು. ಕಳೆದ ಒಂದು ವರ್ಷದಿಂದ ಈ ಭ್ರೂಣ ಹತ್ಯೆ ನಡೆಯುತ್ತಿದೆ. ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಅವರ ಕಾರ್ಯಕ್ಕೆ ಧನ್ಯವಾದಗಳು. ಈ ರೀತಿ ಘಟನೆಗಳಿಂದ ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತದೆ. ಈ ಕೃತ್ಯದಲ್ಲಿ ಭಾಗಿಯಾಗಿದ್ದ 36 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸರ್ಕಾರ ಒಂದು ತಂಡ ರಚಿಸಿ ಭ್ರೂಣ ಹತ್ಯೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಪೊಲೀಸರು ಇನಷ್ಟು ತನಿಖೆ ನಡೆಸಿ ಇದರಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು" ಎಂದು ಆಗ್ರಹಿಸಿದರು.
ಇದನ್ನೂ ಓದಿ: ಮಂಡ್ಯ: ಮೈಶುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ಗೆ ಕಬ್ಬು ಬೆಳೆಗಾರರಿಂದ ಘೇರಾವ್ - Outrage against C D Gangadhar