ನೆಲಮಂಗಲ: ತಾವರೆ ಹೂವು ಕೀಳಲು ಹೋದ ವ್ಯಕ್ತಿಯೊಬ್ಬರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಂಪುರ ಹೋಬಳಿಯ ಬಿಲ್ಲಿನಕೋಟೆ-ಹೊಸಹಳ್ಳಿ ಇಂದು ಮಧ್ಯಾಹ್ನ ನಡೆದಿದೆ. ಗೋವೇನಹಳ್ಳಿಯ ಮರಿಗಂಗಯ್ಯ (45) ಮೃತರು. ಸ್ಥಳೀಯರ ನೆರವಿನ ಮೂಲಕ ಅಗ್ನಿಶಾಮಕ ಸಿಬ್ಬಂದಿ ಶವವನ್ನು ಕೆರೆಯಿಂದ ಹೊರಗೆ ತೆಗೆದರು.
ಗ್ರಾಮದ ಈಜುಪಟು ಸಿದ್ದಲಿಂಗಯ್ಯ ಎಂಬವರ ಸಹಕಾರದಿಂದ ಶವ ಪತ್ತೆಯಾಯಿತು. ನೆಲಮಂಗಲ ಅಗ್ನಿಶಾಮಕ ಠಾಣೆ ಎಲ್ಲಾ ಪರಿಕರಗಳಿಂದ ಸಶಕ್ತವಾಗಬೇಕು. ತುಮಕೂರು ಅಗ್ನಿಶಾಮಕ ಠಾಣೆಯನ್ನು ಅವಲಂಬಿಸುವುದನ್ನು ಬಿಡಬೇಕು. ದುರ್ಘಟನೆಗಳಾದಾಗ ಸೂಕ್ತ ಪರಿಕರಗಳಿಂದ ಕಾರ್ಯಾಚರಣೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ತಾವರೆ ಹೂವು ಕೀಳುವಾಗ ಎಚ್ಚರಿಕೆ ವಹಿಸಿ: ತಾವರೆ ಹೂವು ನೋಡಲು ಚಂದ. ವರಮಹಾಲಕ್ಷ್ಮೀ ಹಬ್ಬದಲ್ಲಿ ಈ ಹೂವಿಗೆ ಮಾರುಕಟ್ಟೆಯಲ್ಲಿ ಬೆಲೆಯೂ ಹೆಚ್ಚು. ಆದರೆ, ಕೆರೆಯಲ್ಲಿ ತಾವರೆ ಗಿಡದ ಅಂಬು ಸುರಳಿ-ಸುರಳಿಯಾಗಿ ಸುತ್ತಿಕೊಂಡಿರುತ್ತದೆ. ಹೂವು ಕೀಳಲು ಹೋದವರು ಚಕ್ರವ್ಯೂಹದ ರೀತಿ ಸುಳಿಯಲ್ಲಿ ಸಿಲುಕುವ ಸಾಧ್ಯತೆ ಇದೆ. ಆದ್ದರಿಂದ ತಾವರೆ ಕೀಳುವಾಗ ಬಹಳ ಎಚ್ಚರ ವಹಿಸಬೇಕು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ: 10 ಅಡಿ ಉದ್ದ, 28 ಕೆ.ಜಿ ತೂಕದ ಹೆಬ್ಬಾವು ಸೆರೆ!- ವಿಡಿಯೋ - Python Rescued