ಮೈಸೂರು: ದೇಶದಲ್ಲಿ 'ಮೇಕ್ ಇನ್ ಇಂಡಿಯಾ' ಪರಿಕಲ್ಪನೆ ಸಾಕಾರಗೊಳ್ಳುತ್ತಿದೆ. ಈ ಪರಿಕಲ್ಪನೆಗೆ ಸಾಕಷ್ಟು ಹಿಂದೆಯೇ ಮೈಸೂರಿನ ರಾಜವಂಶಸ್ಥರು ಚಾಲನೆ ನೀಡಿದ್ದರು ಎಂಬುದಕ್ಕೆ 'ಮೇಕ್ ಇನ್ ಮೈಸೂರು' ಪರಿಕಲ್ಪನೆಯಲ್ಲಿ ಮೂಡಿಬಂದ ಜಾವ ಬೈಕ್ ಒಂದು ವಿಶೇಷ ನಿದರ್ಶನ. ಇಂತಹ ಜಾವ ಬೈಕ್ ಮೈಸೂರಿನಲ್ಲಿ ಹುಟ್ಟಿ, ಇಂದಿಗೂ ಇಲ್ಲಿನ ಪರಂಪರೆಯ ಪ್ರತೀಕವಾಗಿದೆ.
ಮೊದಲ ದೇಶಿಯ ಬೈಕ್ ಆಗಿ ರಸ್ತೆಗಿಳಿದ ಜಾವ 'ರೋಡ್ ಕಿಂಗ್' ಎಂಬ ಖ್ಯಾತಿ ಪಡೆದಿದೆ. 1961ರಲ್ಲಿ ಮೈಸೂರಿನಲ್ಲಿ ಜಾವ ಬೈಕ್ ಕಂಪನಿಯನ್ನು ಉದ್ಯಮಿ ಎಫ್.ಕೆ.ಇರಾನಿ ಆರಂಭಿಸಿದ್ದರು. 1962ರಲ್ಲಿ ಇದೇ ಜಾವ ಬೈಕ್ ಕಾರ್ಖಾನೆ ಮೈಸೂರಿನ ಯಾದವಗಿರಿಯಲ್ಲಿ ಜಯಚಾಮರಾಜೇಂದ್ರ ಒಡೆಯರ್ ನೀಡಿದ 28 ಎಕರೆ ಜಾಗದಲ್ಲಿ ಕಾರ್ಯಾರಂಭಿಸಿತ್ತು. ಕಂಪನಿ 1995ರವರೆಗೂ ನಡೆದು ವಿವಿಧ ಮಾದರಿಯ ಬೈಕ್‌ಗಳನ್ನು ನಿರ್ಮಿಸಿತು. ಮೊದಲು ಚಕೋಸ್ಲೋಕಿಯಾ ಸಹಯೋಗದೊಂದಿಗೆ ಆರಂಭವಾದ ಈ ಬೈಕ್ ನಂತರ ದೇಶಿಯ ಉತ್ಪಾದನೆ ಆರಂಭಿಸಿತು. ಕಡಿಮೆ ಖರ್ಚು, ಅದ್ಬುತ ಪ್ರಯಾಣ ಹಾಗೂ ಎಲ್ಲ ರಸ್ತೆಗಳಿಗೂ ಹೊಂದಿಕೊಳ್ಳುವ ಬೈಕ್ ಎಂಬ ಜನಪ್ರಿಯತೆ ಜಾವಾಗಿದೆ. 1995ರಲ್ಲಿ ಜಾವಾ ಉತ್ಪಾದನೆ ಸ್ಥಗಿತಗೊಳಿಸಿದ್ದು, ಇತ್ತೀಚಿಗಷ್ಟೇ ಹೊಸ ರೂಪದಲ್ಲಿ ಬಂದಿದೆ.
ಪ್ರತಿ ವರ್ಷ ಜುಲೈ ತಿಂಗಳ 2ನೇ ಭಾನುವಾರ 'ಅಂತಾರಾಷ್ಟ್ರೀಯ ಜಾವ ದಿನ' ಆಚರಿಸಲಾಗುತ್ತದೆ. ಮೈಸೂರಿನಲ್ಲಿ ಇಂದಿಗೂ ಹಳೆಯ ಜಾವ, ಯೆಜ್ಡಿ ಸೇರಿದಂತೆ ವಿವಿಧ ನಮೂನೆಯ ಹಳೆಯ ಒಂದು ಸಾವಿರಕ್ಕೂ ಹೆಚ್ಚು ಬೈಕ್ಗಳಿವೆ. ವಿವಿಧ ಜಾವ ಹಳೆಯ ಸಂಘಗಳೂ ಇವೆ.
ಜಾವ ಅಭಿಮಾನಿ ರಾಜೇಶ್ ಜೈನ್ ಪ್ರತಿಕ್ರಿಯಿಸಿ, "ಮೈಸೂರಿನಲ್ಲಿ 1961ರಲ್ಲಿ ಮೊದಲ ಬಾರಿಗೆ ಜಾವ ಬೈಕ್ ಕಂಪನಿಯನ್ನು ತೆರೆಯಲಾಯಿತು. ಜಯಚಾಮರಾಜೇಂದ್ರ ಒಡೆಯರ್ ಅವರ ಆತ್ಮೀಯರಾಗಿದ್ದ ಎಫ್.ಕೆ.ಇರಾನಿ ಕಂಪನಿ ಪ್ರಾರಂಭಿಸಿದರು. ಒಡೆಯರ್ ಜಾಗ ನೀಡಿ ಸಹಾಯ ಮಾಡಿದ್ದರು. ಮೊದಲಿಗೆ ಜಾವ ಬೈಕ್‌ಗಳನ್ನು ಬೇರೆ ಕಡೆಯಿಂದ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡಲಾಗುತ್ತಿತ್ತು. ಆದರೆ 1962ರಲ್ಲಿ ಮೈಸೂರಿನಲ್ಲಿ ಜಾವ ಕಂಪನಿ ನಿರ್ಮಿಸಿ ಬೈಕ್‌ಗಳನ್ನು ತಯಾರಿಸಲು ಪ್ರಾರಂಭಿಸಿತು" ಎಂದರು.

ಮೈಸೂರಿನಲ್ಲಿ ಪ್ರಾರಂಭಿಸಿದ ಕಂಪನಿಯಲ್ಲಿ ಮೊದಲಿಗೆ ಜಾವ, ನಂತರ 1972ನಲ್ಲಿ ಯೆಜ್ಡಿ (yezdi) ಎನ್ನುವ ವಿಭಿನ್ನ ಬೈಕ್ ಮಾಡಲ್ ಪರಿಚಯಿಸಲಾಯಿತು. ಇದರ ಮಧ್ಯೆ 50 CCಯ ಯೆಜ್ಡಿ ಜಾವ ಖ್ಯಾತಿ ಪಡೆಯಿತು. 1976ರಲ್ಲಿ ರೋಡ್ ಕಿಂಗ್, 1984ರಲ್ಲಿ ಜಾವ ಡಬಲ್ ಇಂಜಿನ್ ವೆಹಿಕಲ್ ಇದೇ ರೀತಿ ವಿವಿಧ ಮಾಡೆಲ್‌ಗಳನ್ನು ಜಾವ ಪರಿಚಯಿಸಿತು. 1995ರವರೆಗೂ ಕಂಪನಿಯು ಅಭೂತಪೂರ್ವವಾಗಿ ಕಾರ್ಯನಿರ್ವಹಿಸಿ, ನಂತರದಲ್ಲಿ ಆಡಳಿತ ಸಮಸ್ಯೆಯಿಂದಾಗಿ ಮುಚ್ಚಿತು.

ಜಾವ ಫ್ಯಾಕ್ಟರಿಯಲ್ಲಿ 1,500 ಜನ ಕೆಲಸ ಮಾಡುತ್ತಿದ್ದರು. ಜಾವ ರೈಟ್ಸ್ ಹೊಂದಿದ್ದ ಮಾಲೀಕರು ನಾಗ್ಪುರದಲ್ಲಿ ಮತ್ತೆ ಬೈಕ್‌ಗಳನ್ನು ಹೊಸ ವಿನ್ಯಾಸ ಮತ್ತು ವಿನೂತನವಾಗಿ ತಯಾರಿಸಲು ಪ್ರಾರಂಭಿಸಿದರು. ಆಗಿನ ಕಾಲದಲ್ಲಿ ಜಾವ ಬೈಕ್‌ಗಳನ್ನು ಸಿನಿಮಾ, ಜಾಹೀರಾತುಗಳಿಗೆ ಹೆಚ್ಚು ಬಳಕೆ ಮಾಡುತ್ತಿದ್ದರು. ಕನ್ನಡದ ಡಾ.ರಾಜಕುಮಾರ್, ಶಂಕರ್ ನಾಗ್ ಸೇರಿದಂತೆ ವಿವಿಧ ಕಲಾವಿದರು ತಮ್ಮ ಚಿತ್ರಗಳಲ್ಲಿ ಜಾವ ಬೈಕ್ಗಳನ್ನೇ ಬಳಸುತ್ತಿದ್ದರು. ಕ್ರಿಕೆಟರ್ ರವಿಶಾಸ್ತ್ರಿ ಜಾವಾ ಬೈಕ್ನ ಬ್ರ್ಯಾಂಡ್ ರಾಯಭಾರಿಯಾಗಿದ್ದರು.
ಅಂದು ಭಾರತದಲ್ಲಿ 250 CC, 2 Stocrk AV ಬೈಕ್ಗಳು ಯಾವುದೂ ಇರಲಿಲ್ಲ. ಜಾವ ಮಾತ್ರ ಇತ್ತು. ಈ ಬೈಕ್ಗಳಲ್ಲಿ ದೂರ ಪಯಣ ಮಾಡಲು ಸುಲಭವಾಗುತ್ತಿತ್ತು. ಜಾವಾ ಬೈಕ್ ಶಬ್ದ ತನ್ನದೇ ಆದ ಅಭಿಮಾನಿ ಬಳಗ ಹೊಂದಿದೆ.

ಮೈಸೂರಿನಲ್ಲಿ ಈಗಲೂ 800ರಿಂದ 1000ವರೆಗೂ ಜಾವಾ ಬೈಕ್‌ಗಳನ್ನು ಕಾಣಬಹುದು. ಈ ಬೈಕ್ಗಳ ರಿಪೇರಿ ಕೆಲಸವೂ ಸುಲಭ. ಜೆನೆಟ್ ಆ್ಯಂಡ್ ವ್ಯಾಟ್ಸನ್ ಎಂಬಿಬ್ಬರು ಸೇರಿ ಜಾವ ಬೈಕ್ ಅನ್ನು ಪ್ರಾರಂಭಿಸಿದ್ದರು. ಪ್ರತಿ ವರ್ಷ ಜುಲೈ ತಿಂಗಳ ಎರಡನೇ ಭಾನುವಾರದಂದು ಪ್ರಪಂಚದಲ್ಲೆಡೆ ಅಂತಾರಾಷ್ಟ್ರೀಯ ಜಾವ ಡೇ ಆಚರಣೆ ಮಾಡಲಾಗುತ್ತದೆ.

ಜಾವಾ ಮೋಟಾರ್ ಬೈಕ್ ಸವಾರಿಗೆ ಚಾಲನೆ: ಮೈಸೂರಿನ ರಂಗಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಇಂದು ಪಾರಂಪರಿಕ ಜಾವಾ ಮೋಟಾರ್ ಬೈಕ್ ಸವಾರಿಗೆ ಚಾಲನೆ ನೀಡಲಾಯಿತು.