ಮೈಸೂರು : ದೇಶಕ್ಕೆ ಮೊಟ್ಟಮೊದಲ ಬಾರಿಗೆ ಪ್ರಜಾಪ್ರತಿನಿಧಿ ವ್ಯವಸ್ಥೆಯನ್ನ ಜಾರಿಗೆ ತಂದ ಮೈಸೂರು ರಾಜಮನೆತನದ ಎರಡನೇ ಕುಡಿ, ಎರಡು ದಶಕಗಳ ಬಳಿಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ಮರಳಿದ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ಗೆ ಈ ಬಾರಿ ಬಿಜೆಪಿಯಿಂದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡಿದ್ದು, ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಹೇಳುತ್ತಲೇ ಯದುವೀರ್ ಒಡೆಯರ್ ರಾಜಕಾರಣಕ್ಕೆ ಇಳಿದಿದ್ದಾರೆ. ಹಾಗಾದರೆ 32 ವರ್ಷದ ಯದುವೀರ್ ಒಡೆಯರ್ ಅವರ ಹಿನ್ನೆಲೆ ಏನು?. ವಿದ್ಯಾಭ್ಯಾಸ ಎಲ್ಲಾ ವಿವರಗಳ ಪೂರ್ಣ ಮಾಹಿತಿ ಇಲ್ಲಿದೆ.
![Maharaja Yaduvir Wodeyar](https://etvbharatimages.akamaized.net/etvbharat/prod-images/14-03-2024/mys02-14-03-2024-yaduveerstory-7208092_14032024131324_1403f_1710402204_215.jpg)
ಮೈಸೂರು ರಾಜಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರಿಗೆ ಮಕ್ಕಳಿಲ್ಲದ ಕಾರಣ ಅವರು ನಿಧನರಾದ ನಂತರ ರಾಜಮಾತೆ ಪ್ರಮೋದಾದೇವಿ ಒಡೆಯರ್ ಫೆಬ್ರವರಿ - 23-2015 ರಂದು ಇವರನ್ನ ದತ್ತು ಪಡೆದುಕೊಂಡರು. ನಂತರ ಇವರು ಅಧಿಕೃತವಾಗಿ ಮೈಸೂರು ರಾಜಮನೆತನದ ಒಡೆಯರಾದರು ಹಾಗೂ ಮೈಸೂರು ಮಹಾ ಸಂಸ್ಥಾನದ 27ನೇ ರಾಜರಾಗಿ ಸಿಂಹಾಸನ ಏರಿದರು. ಅಂದಿನಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಎಂಬ ಹೆಸರಿನಿಂದ ಸಿಂಹಾಸನ ಏರಿ ಮೈಸೂರು ಮಹಾಸಂಸ್ಥಾನದ ರಾಜರಾದರು.
ಯದುವೀರ್ ಗೋಪಾಲರಾಜ ಅರಸ್ ಎಂಬ ಜನ್ಮನಾಮ ಇವರದ್ದು. ದತ್ತು ನಂತರ ಸಿಂಹಾಸನ ಏರಿದ ನಂತರ ಇವರ ಹೆಸರು ಬದಲಾವಣೆ ಆಗಿದೆ. ಈಗ ರಾಜಸ್ಥಾನದ ದುಂಗರ ಪುರದ ರಾಜವಂಶದ ರಾಜಕುಮಾರಿ ತ್ರಿಶಿಕಾ ಕುಮಾರಿ ಅವರನ್ನ ಮದುವೆ ಆಗಿದ್ದು, ಇವರಿಗೆ ಆದ್ಯವೀರ ನರಸಿಂಹರಾಜ ಒಡೆಯರ್ ಎಂಬ ಮಗನಿದ್ದಾನೆ.
![Maharaja Yaduvir Wodeyar](https://etvbharatimages.akamaized.net/etvbharat/prod-images/14-03-2024/mys02-14-03-2024-yaduveerstory-7208092_14032024131324_1403f_1710402204_147.jpg)
ಯದುವೀರ್ ಒಡೆಯರ್ ಶಿಕ್ಷಣ : ಯದುವೀರ್ ಅವರು ಬೆಂಗಳೂರಿನ ವಿದ್ಯಾನಿಕೇತನ್ ಶಿಕ್ಷಣ ಸಂಸ್ಥೆಯಲ್ಲಿ ಎಸ್ಎಸ್ಎಲ್ಸಿ ಮುಗಿಸಿ, ಕೆನೆಡಿಯನ್ ಅಂತಾರಾಷ್ಟೀಯ ಶಾಲೆಯಲ್ಲಿ ಪಿಯುಸಿ ಪಾಸ್ ಆಗಿ, ನಂತರ ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ಆಂಗ್ಲ ಭಾಷೆ ವಿಷಯದಲ್ಲಿ ಬಿಎ ಪದವಿ ಪಡೆದಿದ್ದಾರೆ. ಯದುವೀರ್ ಒಡೆಯರ್ಗೆ ಇತಿಹಾಸ ವಿಷಯದಲ್ಲಿ ಆಸಕ್ತಿ ಇದೆ. ಮೈಸೂರು ಸಂಸ್ಥಾನದ ಮಹಾರಾಜ ಆದ ನಂತರ ಕಳೆದ 9 ವರ್ಷಗಳಿಂದಲೂ ವಿವಿಧ ಸಾಮಾಜಿಕ ಹಾಗೂ ಶಾಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಮಕ್ಕಳಿಗೆ ಉತ್ತೇಜನ ನೀಡುವ ಸಲಹೆಗಳನ್ನು ನೀಡುತ್ತಿದ್ದರು.
ಈಗ ಇವರಿಗೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಘೋಷಣೆ ಮಾಡಲಾಗಿದೆ. ಆ ಮೂಲಕ ಎರಡು ದಶಕಗಳ ಬಳಿಕ ರಾಜಮನೆತನದ ಎರಡನೇ ಮಹಾರಾಜ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿದಂತಾಗಿದೆ.
ರಾಜಮನೆತನದ ಶ್ರೀಕಂಠದತ್ತ ಒಡೆಯರ್ ಅವರ ರಾಜಕೀಯ ಇತಿಹಾಸ: ಮೈಸೂರು ರಾಜಮನೆತನದ ದಿವಂಗತ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ 6 ಬಾರಿ ಚುನಾವಣೆಯಲ್ಲಿ ಭಾಗವಹಿಸಿ, 4 ಚುನಾವಣೆಯಲ್ಲಿ ಜಯಗಳಿಸಿದ್ದು ಇತಿಹಾಸ. ಅದರಲ್ಲಿ 1984 ಹಾಗೂ 1989 ರಲ್ಲಿ ಕಾಂಗ್ರೆಸ್ನಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ 1996 ಮತ್ತು 1999ರಲ್ಲಿ ಮತ್ತೆ ಕಾಂಗ್ರೆಸ್ನಿಂದ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀಕಂಠದತ್ತ ಒಡೆಯರ್ 1991ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಕಾಂಗ್ರೆಸ್ನ ಚಂದ್ರಪ್ರಭಾ ಅರಸ್ ವಿರುದ್ಧ ಸೋಲು ಕಂಡಿದ್ದರು.
ಬಳಿಕ 2004ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿ ಬಿಜೆಪಿಯ ಸಿ. ಹೆಚ್ ವಿಜಯ್ ಶಂಕರ್ ವಿರುದ್ಧ ಸೋಲು ಕಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರ ಸರಿದಿದ್ದರು. ಆದಾದ ಬಳಿಕ ಅನಾರೋಗ್ಯದ ಹಿನ್ನೆಲೆ ನಿಧನರಾದರು. ಬಳಿಕ ಪ್ರಮೋದಾದೇವಿ ಒಡೆಯರ್ ಸಕ್ರಿಯ ರಾಜಕಾರಣದಿಂದ ದೂರ ಉಳಿದು, ತಮ್ಮ ಕುಟುಂಬದ ಆಸ್ತಿಗಳ ರಕ್ಷಣೆ ಕಡೆ ಗಮನ ಹರಿಸಿದ್ದರು.
![Maharaja Yaduvir Wodeyar](https://etvbharatimages.akamaized.net/etvbharat/prod-images/14-03-2024/mys02-14-03-2024-yaduveerstory-7208092_14032024131324_1403f_1710402204_75.jpg)
ಸಕ್ರಿಯ ರಾಜಕಾರಣಕ್ಕೆ ಯದುವೀರ್ : 23ನೇ ವರ್ಷಕ್ಕೆ ಮೈಸೂರು ಮಹಾಸಂಸ್ಥಾನಕ್ಕೆ ದತ್ತುಪುತ್ರನಾಗಿ ಬಂದ ಯದುವೀರ್ ಬಳಿಕ ಮದುವೆ ಆಗಿ ಕಳೆದ 9 ವರ್ಷಗಳಿಂದ ಸಕ್ರಿಯ ಸಮಾಜ ಸೇವೆಗಳ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರನ್ನ 2019ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಬಿಜೆಪಿ ಹೈಕಮಾಂಡ್ ಮನವೊಲಿಸಲು ಪ್ರಯತ್ನಿಸಿತು. ಆದರೆ ಆಗ ಯದುವೀರ್ ಒಡೆಯರ್ ಆಸಕ್ತಿ ತೋರಲಿಲ್ಲ.
ಇದಾದ ಬಳಿಕ ವಿಶ್ವಯೋಗ ದಿನಕ್ಕೆ ಮೈಸೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ ಅಮಿತ್ ಶಾ ಅವರು ಅರಮನೆಗೆ ಭೇಟಿ ನೀಡಿದಾಗ, ಯದುವೀರ್ ಹಾಗೂ ಪ್ರಮೋದಾದೇವಿ ಒಡೆಯರ್ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿರುವ ಸುದ್ದಿಗಳು ಹೊರ ಬಿದ್ದಿದ್ದವು. ಯದುವೀರ್ ಒಡೆಯರ್ ಅವರ ಮಾವನ ಮೂಲಕವೂ ಒತ್ತಡ ಇದ್ದುದರಿಂದ ಕೊನೆಗೂ ಸಕ್ರಿಯ ರಾಜಕಾರಣಕ್ಕೆ ಬರಲು ಒಪ್ಪಿದ್ದು, ಆ ಬಳಿಕವೇ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಪಡೆಯದೇ ಲೋಕಸಭೆ ಕ್ಷೇತ್ರದ ಟಿಕೆಟ್ ಪಡೆದಿದ್ದು, ಈಗ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆದು ಬಳಿಕ ಪಕ್ಷದ ಹಿರಿಯರನ್ನು ಭೇಟಿಯಾಗಿ ಚುನಾವಣೆ ಪ್ರಚಾರವನ್ನ ಯದುವೀರ್ ಒಡೆಯರ್ ಆರಂಭಿಸಲಿದ್ದಾರೆ.
ಇದನ್ನೂ ಓದಿ : ಕರ್ನಾಟಕದ 20 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ: 9 ಹಾಲಿ ಸಂಸದರಿಗೆ ಕೊಕ್, ಮೈಸೂರಿನಿಂದ ಯದುವೀರ್ ಒಡೆಯರ್ ಕಣಕ್ಕೆ