ಬೆಳಗಾವಿ : ಸಾರ್ವಜನಿಕರ ಕೆಲಸಗಳು ವಿಳಂಬ ಆಗುತ್ತಿರುವ ಬಗ್ಗೆ ಸಾಕಷ್ಟು ದೂರು ಕೇಳಿ ಬಂದ ಹಿನ್ನೆಲೆ ಮಂಗಳವಾರ ಬೆಳ್ಳಂ ಬೆಳಗ್ಗೆ ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಬಾಗಿಲು ತೆರೆಯುತ್ತಿದ್ದಂತೆ, ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಅಧಿಕಾರಿಗಳ ಚಳಿ ಬಿಡಿಸಿದರು.
ಲೋಕಾಯುಕ್ತ ಎಸ್ಪಿ ಹಣಮಂತರಾಯ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದು, ಹಣಮಂತ ರಾಯ್ ಅವರಿಗೆ 10ಕ್ಕೂ ಅಧಿಕ ಲೋಕಾಯುಕ್ತ ಸಿಬ್ಬಂದಿ ಸಾಥ್ ನೀಡಿದರು. ಮಹಾನಗರ ಪಾಲಿಕೆಗೆ ವಿವಿಧ ಕೆಲಸಗಳಿಗೆ ಬರುವ ಸಾರ್ವಜನಿಕರು ಒಂದೂವರೆ ಗಂಟೆ ಕಾಯ್ದರೂ ಸಂಬಂಧಿಸಿದ ಅಧಿಕಾರಿಗಳು ಕಚೇರಿಗೆ ಬಾರದಿರುವುದು ದಾಳಿ ವೇಳೆ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಬಂತು. ಒಬ್ಬೊಬ್ಬರೆ ಕಚೇರಿಗೆ ಬಂದ ಪಾಲಿಕೆ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡರು.
ಜನನ ಮತ್ತು ಮರಣ ಪತ್ರದ ಕಚೇರಿಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ಗಮನಿಸಿದ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದರು. ಹೆಚ್ಚಿಗೆ ಹಣ ಏಕೆ ಸಂಗ್ರಹಿಸುತ್ತಿದ್ದೀರಿ..? ಕೊಟ್ಟ ಹಣಕ್ಕೆ ಏಕೆ ರಶೀದಿ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಆಗ ಸಿಬ್ಬಂದಿ ಸಮರ್ಪಕ ಉತ್ತರ ನೀಡದೇ ತಡಬಡಾಯಿಸಿದರು. ಅಲ್ಲದೇ ಚಿಲ್ಲರೆ ಸಮಸ್ಯೆಯಾದರೆ ಕ್ಯೂಆರ್ ಕೋಡ್ ಅಳವಡಿಸುವಂತೆ ತಾಕೀತು ಮಾಡಿದರು. ಜನನ ಮತ್ತು ಮರಣ ಪ್ರಮಾಣ ಪತ್ರ ದರ ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣಿಸುವಂತೆ ಪ್ರದರ್ಶಿಸುವಂತೆ ಸೂಚಿಸಿದರು. ಪರಿಸರ, ಆರೋಗ್ಯ, ಶಿಕ್ಷಣ, ಇಂಜಿನಿಯರಿಂಗ್ ವಿಭಾಗ ಸೇರಿದಂತೆ ತೆರಿಗೆ ಪಾವತಿ ಕೇಂದ್ರಕ್ಕೂ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆ ಆಲಿಸಿದರು.
ಸಾರ್ವಜನಿಕ ಪ್ರತಾಪ ಶ್ರೇಯಕರ್ ಮಾತನಾಡಿ, ''ಕಳೆದ ತಿಂಗಳು ನಾನು ಜನನ ಪತ್ರದ ತಿದ್ದುಪಡಿಗೆ ಅರ್ಜಿ ಸಲ್ಲಿಸಿದಾಗ ಸಹಿ ಮಾಡಿ ನಕಲು ಪ್ರತಿ ಕೊಟ್ಟರು. ಆದರೆ, 15 ರೂ. ಪಡೆದು ರಶೀದಿ ಕೊಡಲಿಲ್ಲ. ಇಂದು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಇಲ್ಲಿನ ಸಮಸ್ಯೆ ತಿಳಿದುಕೊಂಡಿದ್ದಾರೆ. ಅಲ್ಲದೇ ಚಿಲ್ಲರೆ ಹಣಕ್ಕೆ ಕ್ಯೂಆರ್ ಕೋಡ್ ಅಳವಡಿಸುವಂತೆ ಸೂಚಿಸಿದ್ದಾರೆ. ಪ್ರತಿ ಪ್ರಮಾಣ ಪತ್ರ ಪಡೆಯಲು ಬಹಳಷ್ಟು ವಿಳಂಬವಾಗುತ್ತಿದೆ'' ಎಂದು ದೂರಿದ್ದಾರೆ.
ನಗರ ಸೇವಕ ಹಣಮಂತ ಕೊಂಗಾಲಿ ಮಾತನಾಡಿ, ''ತೆರಿಗೆ ವಂಚನೆ, ಲ್ಯಾಂಡ್ ಮಾಫಿಯಾ ಸೇರಿ ನಾಲ್ಕೈದು ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಶಿಫಾರಸು ಮಾಡಿದ್ದೆವು. ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದರೂ ಕಾಂಗ್ರೆಸ್ ಸರ್ಕಾರದ ಕೈಗೊಂಬೆಯಾಗಿ ಇಲ್ಲಿನ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸೂಕ್ತ ತನಿಖೆ ನಡೆಸದಿದ್ದರೆ ನಾವು ಕೋರ್ಟ್ಗೆ ಹೋಗುತ್ತೇವೆ. ಭ್ರಷ್ಟ ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ ಅವರು, ಇಂದು ಲೋಕಾಯುಕ್ತ ದಾಳಿ ಆಗಿದ್ದು, ಏನೇನು ವಿಚಾರಣೆ ಆಗಿದೆ ಎಂದು ತಿಳಿದು ಮುಂದಿನ ಹೆಜ್ಜೆ ಇಡುತ್ತೇವೆ'' ಎಂದು ತಿಳಿಸಿದರು.
ಇದನ್ನೂ ಓದಿ : 18 ತಿಂಗಳಲ್ಲಿ 71 ಭ್ರಷ್ಟ ಅಧಿಕಾರಿ, ಸಿಬ್ಬಂದಿಗಳಿಗೆ ಜೈಲಿನ ದಾರಿ ತೋರಿಸಿದ ಲೋಕಾಯುಕ್ತ ಪೊಲೀಸರು - Lokayuktha Cases