ಬೆಂಗಳೂರು : ಪ್ರಕರಣವೊಂದರಲ್ಲಿ ಆರೋಪಿ ನಿರೀಕ್ಷಣಾ ಜಾಮೀನಿಗೆ ಅನುಕೂಲ ಒದಗಿಸಲು ಲಂಚ ಸ್ವೀಕರಿಸುತ್ತಿದ್ದ ಕೆ.ಆರ್.ಪುರಂ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಪಿಎಸ್ಐ ಅವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಂಚನೆ ಪ್ರಕರಣದ ಆರೋಪಿಯಿಂದ 3 ಲಕ್ಷ ರೂಗೆ ಬೇಡಿಕೆಯಿಟ್ಟು ಇಂದು ತಲಾ 50 ಸಾವಿರ ಸ್ವೀಕರಿಸುತ್ತಿದ್ದ ವೇಳೆ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರೋಪವೇನು?: ಜಮೀನು ಕೊಡಿಸುವುದಾಗಿ ವಂಚಿಸಿದ್ದ ಆರೋಪದಡಿ ಶ್ರೀರಾಮ್ ಹಾಗೂ ಜಯಶೀಲಾ ಎಂಬ ದಂಪತಿಯ ವಿರುದ್ಧ ಮಾರ್ಚ್ 12 ರಂದು ಕೆ.ಆರ್. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ವೇಳೆ ಶ್ರೀರಾಮ್ ಅವರನ್ನು ವಶಕ್ಕೆ ಪಡೆದು, ಬಿಡುಗಡೆಗೆ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
50 ಸಾವಿರ ರೂ. ಪಡೆದು ಬಿಡುಗಡೆಗೊಳಿಸಿದ್ದ ಇನ್ಸ್‌ಪೆಕ್ಟರ್ ಹಾಗೂ ಸಬ್ ಇನ್ಸ್‌ಪೆಕ್ಟರ್, ನಂತರ ಪುನಃ ಬಾಕಿ 4.5 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ವಿಚಾರವಾಗಿ ಆರೋಪಿಗಳ ಪರ ವಕೀಲ ಎಂ.ವೆಂಕಟಾಚಲಪತಿಯವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಅದರನ್ವಯ ಪ್ರಕರಣ ದಾಖಲಿಸಿಕೊಂಡು ಟ್ರ್ಯಾಪ್ ಕಾರ್ಯಾಚರಣೆ ನಡೆಸಿ ಗುರುವಾರ ತಲಾ 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇನ್ಸ್‌ಪೆಕ್ಟರ್ ಹಾಗೂ ಪಿಎಸ್ಐ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬೇರೊಬ್ಬರ ಪಾಸ್ಪೋರ್ಟ್ ಬಳಸಿ ಪ್ರಯಾಣಿಸಲು ಯತ್ನ: ವ್ಯಕ್ತಿಯ ಬಂಧನ