ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕಾಂಗ್ರೆಸ್ ನಿದ್ದೆಗೆಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ಶಿಕಾರಿಪುರಕ್ಕೆ ಎರಡು ದಿನಗಳ ಮತ ಪ್ರಚಾರಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆ ಮೀರಿ ಬಿಜೆಪಿ ಪರ ಒಲವು ಕಾಣಿಸುತ್ತಿದೆ ಎಂದರು.
ರಾಜ್ಯದ ಮನೆ ಮನೆಯಲ್ಲಿ ಮೋದಿ ಬಗ್ಗೆ ಮಾತನಾಡುತ್ತಿದ್ದಾರೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕೆಂದು ಹರಸುತ್ತಿದ್ದಾರೆ. ಈ ಬಾರಿ 28 ಸ್ಥಾನಗಳು ಬರುತ್ತವೆ. ಕಾಂಗ್ರೆಸ್ ದಿಕ್ಕಾಪಾಲಾಗುತ್ತದೆ ಎಂದು ಭವಿಷ್ಯ ನುಡಿದರು. ಇದೇ ವೇಳೆ, ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದರೆ ಅದು ಪ್ರಪಂಚದ 8ನೇ ಅದ್ಬುತ ಎಂದ ಅವರು, ಜನರು ಮೋದಿ ಗ್ಯಾರಂಟಿ ನೋಡುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ನೋಡುತ್ತಿಲ್ಲ ಎಂದರು.
ಈಶ್ವರಪ್ಪ ನಮ್ಮೊಂದಿಗೆ ಕೈ ಜೋಡಿಸಲಿ: ಈಶ್ವರಪ್ಪ ಹಿರಿಯರು. ಪಕ್ಷ ಕಟ್ಟಲು ಅವರದೂ ದೊಡ್ಡ ಪಾಲಿದೆ. ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಪಕ್ಷದ ಹಿತದೃಷ್ಟಿಯಿಂದ ಅವರು ನಮ್ಮ ಕೈ ಜೋಡಿಸಬೇಕು. ಇನ್ನೂ ಕಾಲ ಮಿಂಚಿಲ್ಲ. ಸಮಸ್ಯೆಗಳಿದ್ದರೆ ದೆಹಲಿ ನಾಯಕರೊಂದಿಗೆ ಮಾತನಾಡಬಹುದು. ನಾವಂತೂ ಅವರೊಂದಿಗೆ ಇರುತ್ತೇವೆ ಎಂದು ಹೇಳಿದರು.
ರಾಘವೇಂದ್ರ ಮಾಡಿರುವ ಅಭಿವೃದ್ಧಿಯನ್ನು ಜನ ಮಾತನಾಡುತ್ತಿದ್ದಾರೆ. ಈ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಅವರು ಗೆಲ್ಲುತ್ತಾರೆ ಎಂದು ತಿಳಿಸಿದರು.
ಹಾಸನದಲ್ಲಿ ಪ್ರೀತಂ ಗೌಡ ಜತೆ ಮಾತನಾಡಿದ್ದೇನೆ. ಅವರಿಗೆ ಮೈಸೂರು, ಚಾಮರಾಜನಗರದ ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲವೂ ಸರಿ ಹೋಗುತ್ತದೆ. ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಹೆಚ್ಚಿನ ಬಹುಮತದಿಂದ ಗೆಲ್ಲುತ್ತಾರೆ ಎಂದರು.
ಮೋದಿ, ಶಾ ರಾಜ್ಯ ಪ್ರವಾಸಕ್ಕೆ ಬರುತ್ತಾರೆ: ಚುನಾವಣಾ ಪ್ರಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ನಾಲ್ಕೈದು ಬಾರಿ ರಾಜ್ಯ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿದರು.
ಈಶ್ವರಪ್ಪ ಮತಪ್ರಚಾರದಲ್ಲಿ ಮೋದಿ ಭಾವಚಿತ್ರ: ಯಾವ ಸಂದರ್ಭದಲ್ಲಿ ಯಾವ ಫೋಟೋ ಹಾಕಬೇಕೋ ಹಾಕಿಕೊಳ್ಳಲಿ. ಕೋರ್ಟ್ ಏನು ತೀರ್ಮಾನ ಮಾಡುತ್ತದೋ ನೋಡೋಣ. ಮೋದಿ ಭಾವಚಿತ್ರ ಹಾಕಿಕೊಳ್ಳುವುದರಿಂದ ನಮ್ಮ ಕಾರ್ಯಕರ್ತರಿಗೆ ಯಾವುದೇ ಗೊಂದಲ ಆಗಲ್ಲ. ಹಿಂದುತ್ವ ಆಳ ಅಗಲ ಇದೆ, ಅದರದೇ ಆದ ಸಂಸ್ಕಾರ ಇದೆ ಎಂದರು.
ಚಿತ್ರದುರ್ಗ ಮಠದ ಪ್ರಚಾರ: ಚಿತ್ರದುರ್ಗ ಮಠದಲ್ಲಿ ಪ್ರಚಾರ ಮಾಡಿದ್ದೆ ಅಂತಾ ದೂರು ದಾಖಲಾಗಿತ್ತು. ಪ್ರಕರಣ ರದ್ದು ಮಾಡುವಂತೆ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದೇನೆ ಎಂದು ತಿಳಿಸಿದರು.