ವಿಜಯಪುರ: ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ವೈ.ಬೆಳ್ಳುಬ್ಬಿ ಅವರು ವಿಜಯಪುರ ಲೋಕಸಭಾ ಎಸ್ಸಿ ಮೀಸಲು ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಇವರು ಪ್ರಸ್ತುತ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ರಾಜು ಆಲಗೂರು ಅವರ ಸಂಬಂಧಿಯಾಗಿದ್ದಾರೆ.
ತಮ್ಮ ಸ್ಪರ್ಧೆ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಬೆಳ್ಳುಬ್ಬಿ, ನಾನು ಮೊದಲು ಜೆಡಿಎಸ್ ಪಕ್ಷದಲ್ಲಿದ್ದೆ. ಈಗ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಹಾಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮನಸ್ಸು ಮಾಡಿರುವೆ. ಸ್ಥಳೀಯ ಪಕ್ಷಗಳೂ ಸಹ ನನ್ನನ್ನು ಸಂಪರ್ಕಿಸಿವೆ. ಅದರ ಹೊರತಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರು ಅವರನ್ನು ಸೋಲಿಸಲು ಪ್ರಯತ್ನಿಸುವೆ. ನನ್ನದೇ ಆದಂತಹ ಸ್ನೇಹಬಳಗವಿದೆ. ಎಲ್ಲರ ಜತೆಗೂಡಿ ಪ್ರಚಾರ ಆರಂಭಿಸುತ್ತೇನೆ. ಕ್ಷೇತ್ರದ ಜನರ ಒಲವು ಕೂಡ ನಮ್ಮ ಮೇಲಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನ ಅವರನ್ನು ಸೋಲಿಸುವ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಇದೇ ವೇಳೆ ರಾಜು ಆಲಗೂರು ವಿರುದ್ಧ ಕೆಲವು ಆರೋಪಗಳನ್ನು ಮಾಡಿರುವ ಬೆಳ್ಳುಬ್ಬಿ, ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳೂ ನನಗೆ ಪ್ರತಿಸ್ಪರ್ಧಿಗಳೇ. ಅದರಲ್ಲೂ ರಾಜು ಆಲಗೂರು ಅವರನ್ನು ಟಾರ್ಗೆಟ್ ಮಾಡಿ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಶಾಸಕರಾಗಿದ್ದಾಗ ಅವರು ಕ್ಷೇತ್ರಕ್ಕೆ ಏನು ಮಾಡಿದ್ದಾರೆ ಅನ್ನೋದು ಜನರಿಗೆ ಗೊತ್ತಿದೆ ಎಂದು ದೂರಿದರು.
ಇದನ್ನೂ ಓದಿ: ಇಬ್ಬರ ನಡುವೆ ಇದ್ದ ಮುನಿಸು ಅಂತ್ಯ; ಮೋದಿಗಾಗಿ ಒಂದಾದ ವಿಶ್ವನಾಥ್-ಸುಧಾಕರ್ - Lok Sabha election 2024