ಮೈಸೂರು: ಲೋಕಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಮೈಸೂರು-ಕೊಡಗು ಕ್ಷೇತ್ರ ವ್ಯಾಪ್ತಿಯಲ್ಲಿ 2,202 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ನಾಳೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿ ಸಂಜೆ 6 ಗಂಟೆವರೆಗೆ ನಡೆಯಲಿದೆ.
ಕ್ಷೇತ್ರದಲ್ಲಿ ಒಟ್ಟಾರೆ 20,92,222 ಮತದಾರರಿದ್ದಾರೆ. 2,202 ಮತಗಟ್ಟೆಗಳ ಪೈಕಿ 435 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. 9,809 ಮತಗಟ್ಟೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎಲ್ಲ ಸಿಬ್ಬಂದಿಯೂ ಕೂಡ ಇವಿಎಂ ಯಂತ್ರಗಳೊಂದಿಗೆ ತಮ್ಮ ತಮ್ಮ ಮತದಾನ ಕೇಂದ್ರಗಳಿಗೆ ತೆರಳಿದ್ದಾರೆ. ಇದಕ್ಕಾಗಿ 473 ಕೆಎಸ್ಆರ್ಟಿಸಿ ಬಸ್ಗಳು, 33 ಜೀಪ್ಗಳು, 79 ಮಿನಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
55 ಪಿಂಕ್ ಮತಗಟ್ಟೆಗಳು: ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾಹಿತಿ ನೀಡಿ, ''ಜಿಲ್ಲೆಯಲ್ಲಿ ಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತಗಟ್ಟೆಗಳಲ್ಲಿ ನೆರಳು, ವ್ಹೀಲ್ಚೇರ್ಗಳ ವ್ಯವಸ್ಥೆ, ಶೌಚಾಲಯ, ವೈಟಿಂಗ್ ರೂಮ್ ಸೌಕರ್ಯದ ಜೊತೆಗೆ ಮೆಡಿಕಲ್ ಕಿಟ್ಗಳನ್ನು ಕಲ್ಪಿಸಲಾಗಿದೆ. ಮತದಾರರನ್ನು ಸೆಳೆಯಲು ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಹಿಳಾ ಮತದಾರರಿಗೆ 55 ಪಿಂಕ್ ಮತಗಟ್ಟೆಗಳನ್ನೂ ತೆರೆಯಲಾಗಿದೆ'' ಎಂದು ಮಾಹಿತಿ ನೀಡಿದರು.
ಮತದಾನ ಮಾಡಿ ಮೈಸೂರಿಗೆ ಬನ್ನಿ: ಇದೇ ವೇಳೆ, ''ಮೈಸೂರು ಪ್ರವಾಸಿಗರ ನಗರಿ. ನಾವು ಮತದಾನದ ದಿನ ಪ್ರವಾಸಿ ತಾಣಗಳ ಮುಚ್ಚಲು ಯೋಚನೆ ಮಾಡಿದ್ದೆವು. ಮೈಸೂರಿಗೆ ಬೇರೆ ರಾಜ್ಯ, ದೇಶಗಳಿಂದ ಪ್ರವಾಸಿಗಳು ಬರುವ ದೃಷ್ಟಿಯಿಂದ ಪ್ರವಾಸಿ ತಾಣಗಳನ್ನು ಮುಕ್ತವಾಗಿಟ್ಟಿದ್ದೇವೆ. ಮೈಸೂರು ನೋಡಲು ಬರುವವರು ಮತದಾನ ಮಾಡಿ ಬನ್ನಿ'' ಎಂದು ಅವರು ಸಲಹೆ ನೀಡಿದರು.
ಶೇ.80ರಷ್ಟು ಮತದಾನ ಗುರಿ: ''ಈ ಬಾರಿ ಹೆಚ್ಚು ಮತದಾನ ಆಗಬೇಕು ಎಂಬ ಗುರಿ ಹೊಂದಿದ್ದೇವೆ. ಹೀಗಾಗಿ ಕಳೆದ ಒಂದು ತಿಂಗಳಿಂದ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. 2019ರ ಚುನಾವಣೆಯಲ್ಲಿ ಶೇ.70ರಷ್ಟು ಮತದಾನ ಆಗಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ಶೇ.75ರಷ್ಟು ಮತದಾನವಾಗಿದೆ. ಆದ್ದರಿಂದ ಈ ಸಲ ಲೋಕಸಭಾ ಚುನಾವಣೆಯಲ್ಲಿ ಶೇ.80ರಷ್ಟು ಮತದಾನ ಆಗಬೇಕು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೇವೆ'' ಎಂದರು.
ಇದನ್ನೂ ಓದಿ: ನಾಳೆ ಲೋಕಸಭೆ ಚುನಾವಣೆಗೆ ಮತದಾನ: ಮತಗಟ್ಟೆಗಳತ್ತ ಇವಿಎಂ ಹಿಡಿದು ತೆರಳಿದ ಸಿಬ್ಬಂದಿ