ಬೆಂಗಳೂರು: ಲೋಕಸಭೆ ಚುನಾವಣೆಯ ಸುದೀರ್ಘ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ಈಗೇನಿದ್ದರೂ ಮತ ಎಣಿಕೆಯ ಮೇಲೆ ಎಲ್ಲರ ಕಣ್ಣು. ಜೂನ್ 4ರಂದು ನಡೆಯುವ ಎಣಿಕೆಗಾಗಿ ದೇಶವೇ ಕಾತರದಿಂದ ಕಾಯುತ್ತಿದ್ದು, ಕೇಂದ್ರ ಚುನಾವಣಾ ಆಯೋಗ ಸಕಲ ರೀತಿಯಿಂದಲೂ ಸಜ್ಜಾಗುತ್ತಿದೆ.
ಎಣಿಕೆ ಹೇಗೆ?: ಮತಯಂತ್ರಗಳನ್ನು ಇರಿಸಿರುವ ಸ್ಟ್ರಾಂಗ್ ರೂಮ್ಗಳನ್ನು ಬೆಳಗ್ಗೆ 7 ಗಂಟೆಗೆ ಚುನಾವಣಾಧಿಕಾರಿ (ಆರ್‌ಒ), ರಾಜಕೀಯ ಪಕ್ಷಗಳ ಅಧಿಕೃತ ಮತ ಎಣಿಕೆ ಏಜೆಂಟರುಗಳ ಸಮ್ಮುಖದಲ್ಲಿ ತೆರೆಯಲಾಗುತ್ತದೆ. ಆಯಾ ಲೋಕಸಭೆ ಕ್ಷೇತ್ರಗಳ ಚುನಾವಣಾಧಿಕಾರಿ ಕೇಂದ್ರದ ಉಸ್ತುವಾರಿಯಾಗಿರುತ್ತಾರೆ. ಬೆಳಗ್ಗೆ 8 ಗಂಟೆಯಿಂದ ಎಣಿಕೆ ಆರಂಭವಾಗುತ್ತದೆ. ಮತಯಂತ್ರಗಳಲ್ಲಿನ ಮತ ಎಣಿಕೆಗಾಗಿ ಪ್ರತೀ ಕೌಂಟಿಂಗ್ ಹಾಲ್‌ನಲ್ಲಿ ಸುಮಾರು 14 ಟೇಬಲ್ಗಳನ್ನು ಹಾಕಲಾಗುತ್ತದೆ. ಇವಿಎಂಗಳನ್ನು ಈ ಕೌಂಟಿಂಗ್ ಟೇಬಲ್ಗಳಿಗೆ ಕೊಂಡೊಯ್ದು ಇಡಬೇಕು. ಪ್ರತೀ ಕೌಂಟಿಂಗ್ ಟೇಬಲ್‌ನಲ್ಲಿ ಒಬ್ಬ ಕೌಂಟಿಂಗ್ ಉಸ್ತುವಾರಿ, ಒಬ್ಬ ಎಣಿಕೆ ಸಹಾಯಕ ಹಾಗೂ ಮೈಕ್ರೋ ಒಬ್ಸರ್ವರ್ ಇರುತ್ತಾರೆ. ಎಣಿಕೆ ಹಾಲ್‌ನಲ್ಲಿ ಸುಮಾರು 600 ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.
ಒಂದು ಸುತ್ತಿನಲ್ಲಿ 14 ಟೇಬಲ್ಗಳಲ್ಲಿ 14 ಇವಿಎಂಗಳ ಮತ ಎಣಿಸಲಾಗುತ್ತದೆ. ವಿಧಾನಸಭೆ ಕ್ಷೇತ್ರವಾರು ಎಣಿಕೆ ಸುತ್ತುಗಳು ನಡೆಯುತ್ತವೆ. ಇದರ ಆಧಾರದಲ್ಲಿ ಸುಮಾರು 15ರಿಂದ 19 ಎಣಿಕೆ ಸುತ್ತುಗಳು ಇರಲಿವೆ. ಒಂದು ಸುತ್ತಿನ ಮತ ಎಣಿಕೆ ಮುಗಿದ ಬಳಿಕವೇ ಮತ್ತೊಂದು ಸುತ್ತಿನ ಮತ ಎಣಿಕೆಗಾಗಿ 14 ಇವಿಎಂಗಳನ್ನು ಸ್ಟ್ರಾಂಗ್ ರೂಂನಿಂದ ಕೌಂಟಿಂಗ್ ಟೇಬಲ್ಗಳತ್ತ ತರಲಾಗುತ್ತದೆ.
ಮೊದಲಿಗೆ ಅಂಚೆ ಮತಗಳ ಎಣಿಕೆ: ಮೊದಲಿಗೆ ಅಂಚೆ ಮತಗಳನ್ನು ಎಣಿಸಲಾಗುತ್ತದೆ. ಇದಕ್ಕಾಗಿ ಸುಮಾರು 20 ಟೇಬಲ್ಗಳ ವ್ಯವಸ್ಥೆ ಮಾಡಲಾಗಿರುತ್ತದೆ. ಇ-ಅಂಚೆ ಮತಗಳನ್ನು ಎಣಿಸಲು ಸುಮಾರು 3 ಟೇಬಲ್ಗಳ ವ್ಯವಸ್ಥೆ ಇರುತ್ತದೆ. ಇದಾದ 30 ನಿಮಿಷದಲ್ಲಿ ಇವಿಎಂ ಮತಗಳ ಎಣಿಕೆ ಕಾರ್ಯ ಶುರುವಾಗುತ್ತದೆ.
ಅಂಚೆ ಮತ ಎಣಿಕೆ ನಡೆಯುತ್ತಿರುವಾಗಲೇ ಇತ್ತ ಇವಿಎಂ ಮತ ಎಣಿಕೆ ಆರಂಭಿಸಬಹುದು. RO ಅಂಚೆ ಮತಗಳ ಎಣಿಕೆಯ ಜವಾಬ್ದಾರಿವಹಿಸಿದರೆ, ARO ಇವಿಎಂ ಮತ ಎಣಿಕೆಯ ಜವಾಬ್ದಾರಿ ಹೊಂದಿರುತ್ತಾರೆ. 14 ಇವಿಎಂ ಮತ ಎಣಿಕೆ ಮುಕ್ತಾಯದ ಬಳಿಕ ಪ್ರತೀ ಸುತ್ತಿನ ಫಲಿತಾಂಶವನ್ನು (ಮುನ್ನಡೆ) ಪ್ರಕಟಿಸಲಾಗುತ್ತದೆ. ಪ್ರತೀ ಸುತ್ತಿನ ಫಲಿತಾಂಶವನ್ನು ಆರ್‌ಒ/ಎಆರ್ಒ ಅಂಕಿತದ ಬಳಿಕವೇ ಪ್ರಕಟಿಸಲಾಗುತ್ತದೆ.
ವಿವಿಪ್ಯಾಟ್ ಸ್ಲಿಪ್ ಪರಿಶೀಲನೆ: ಇವಿಎಂ ಮತ ಎಣಿಕೆಯ ಜೊತೆಗೆ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಪ್ರತೀ ವಿಧಾನಸಭೆ ಕ್ಷೇತ್ರಗಳ ಯಾವುದಾದರೂ ಐದು ಮತಗಟ್ಟೆಗಳ ವಿವಿಪ್ಯಾಟ್ ಸ್ಲಿಪ್ಗಳನ್ನು ಪರಿಶೀಲಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಆರ್‌ಒ ಅಥವಾ ಎಆರ್ಒ ಉಸ್ತುವಾರಿಯಲ್ಲಿ ಕೌಂಟಿಂಗ್ ಏಜೆಂಟರ ಸಮ್ಮುಖದಲ್ಲಿ ಮಾಡಲಾಗುತ್ತದೆ. ವಿವಿಪ್ಯಾಟ್ ಸ್ಲಿಪ್ನಲ್ಲಿ ನಮೂದಾಗಿರುವ ಮತವನ್ನು ಇವಿಎಂನಲ್ಲಿ ದಾಖಲಾಗಿರುವ ಮತಗಳಿಗೆ ಹೋಲಿಕೆ ಮಾಡಲಾಗುತ್ತದೆ. ಇವಿಎಂ ಮತ ಎಣಿಕೆ ಮುಗಿದ ಬಳಿಕ ಆ ಇವಿಎಂನಲ್ಲಿನ ಮತವನ್ನು ಅದರ ವಿವಿಪ್ಯಾಟ್ ಸ್ಲಿಪ್ಗಳಿಗೆ ಹೊಂದಾಣಿಕೆ ಮಾಡಿ ಪರಿಶೀಲಿಸಲಾಗುತ್ತದೆ. ಆ ಮೂಲಕ ಇವಿಎಂನಲ್ಲಿ ಚಲಾಯಿಸಿದ ಮತ, ಆಯ್ಕೆ ಮಾಡಿದ ಅಭ್ಯರ್ಥಿಗೇ ಬಿದ್ದಿದೆ ಎಂಬುದನ್ನು ಖಾತ್ರಿ ಮಾಡಲಾಗುತ್ತದೆ.
ಸುಪ್ರೀಂ ಕೋರ್ಟ್ ಆದೇಶದ ಅನುಸಾರ ಪ್ರತೀ ವಿಧಾನಸಭೆ ಕ್ಷೇತ್ರಗಳ ಐದು ಮತಗಟ್ಟೆಗಳಲ್ಲಿ ಅಳವಡಿಸುವ ವಿವಿಪ್ಯಾಟ್ ಸ್ಲಿಪ್ ಅನ್ನು ಇವಿಎಂ ಮತಗಳಿಗೆ ಹೊಂದಾಣಿಕೆ ಮಾಡಿ ಪರಿಶೀಲಿಸಲಾಗುತ್ತದೆ. ವಿವಿಪ್ಯಾಟ್ ಪರಿಶೀಲನೆ ಪ್ರಕ್ರಿಯೆ ಬಳಿಕ ಆರ್‌ಒ ಅಂತಿಮ ಫಲಿತಾಂಶ ಪ್ರಕಟಿಸುತ್ತಾರೆ. ಒಂದು ವೇಳೆ ಇವಿಎಂ ಮತ ಹಾಗೂ ವಿವಿಪ್ಯಾಟ್ ಸ್ಲಿಪ್ನಲ್ಲಿನ ಮತ ಹೊಂದಾಣಿಕೆಯಾಗದೇ ಇದ್ದರೆ, ವಿವಿಪ್ಯಾಟ್ ಸ್ಲಿಪ್ನಲ್ಲಿ ನಮೂದಾಗಿರುವ ಮುದ್ರಿತ ಮತವನ್ನೇ ಅಂತಿಮವಾಗಿ ಪರಿಗಣಿಸಲಾಗುತ್ತದೆ.
ಒಂದು ವೇಳೆ ಮತ ಎಣಿಕೆಯಲ್ಲಿ ಲೋಪವಾದ ಅನುಮಾನ ಕಂಡುಬಂದರೆ ಸಂಬಂಧಿತ ಅಭ್ಯರ್ಥಿ ಅಥವಾ ಕೌಂಟಿಂಗ್ ಏಜೆಂಟ್ ಸಕಾರಣಗಳೊಂದಿಗೆ ಮರು ಮತ ಎಣಿಕೆಗೆ ಕೋರಿ ROಗೆ ಮನವಿ ಸಲ್ಲಿಸಬಹುದು. ಕಾರಣಗಳನ್ನು ಪರಿಶೀಲಿಸಿದ ಬಳಿಕ ಮರು ಮತಎಣಿಕೆ ಮಾಡಬೇಕೋ, ಬೇಡವೋ ಎಂಬ ಅಂತಿಮ ನಿರ್ಧಾರವನ್ನು RO ತೆಗೆದುಕೊಳ್ಳುತ್ತಾರೆ. ಈ ವಿಚಾರದಲ್ಲಿ RO ತೀರ್ಮಾನವೇ ಅಂತಿಮ.
ಇದನ್ನೂ ಓದಿ: ಲೋಕಸಭಾ ಚುನಾವಣೆ: ಮತ ಎಣಿಕೆಗೆ ಬೆಂಗಳೂರಿನಲ್ಲಿ ಸಕಲ ಸಿದ್ಧತೆ, ಬೆಳಗ್ಗೆ 8ಕ್ಕೆ ಕೌಂಟಿಂಗ್ ಶುರು - Lok Sabha Election