ಬೆಂಗಳೂರು: ಬಂಜಾರ ಜನಾಂಗದವರು ಹಳೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದರ ಜೊತೆಗೆ ಆಧುನಿಕರಾಗಬೇಕು ಎಂದು ಹಿರಿಯ ಸಾಹಿತಿ, ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಭಾನುವಾರ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಕಣ್ವ ಪ್ರಕಾಶನ ಹಾಗೂ ಸನ್ಮತಿ ಸಾಹಿತ್ಯದ ಸಹಯೋಗದೊಂದಿಗೆ ಬಿ.ಎಂ.ಶ್ರೀ ಕಲಾ ಭವನದಲ್ಲಿ ಹಮ್ಮಿಕೊಂಡಿದ್ಧ ‘ಕೊಳ್ಳ’ ಹಾಗೂ ‘ಬಂಜಾರಾ' ಮತ್ತು ಜಿಪ್ಸಿ ಕೃತಿಗಳ ಲೋಕಾರ್ಪಣಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, "‘ಕೊಳ್ಳ’ ಕಾದಂಬರಿ ನಮ್ಮ ಹಳೆಯ ಅಸ್ಮಿತೆಯನ್ನು ಹೊಸದಾಗಿಸುವ ಬಂಜಾರರ ಬದುಕನ್ನು ಕಟ್ಟಿಕೊಡುತ್ತದೆ. ಬುಡಕಟ್ಟು ಜನಾಂಗ ಆಧುನಿಕತೆಗೆ ಬರಲು ಅನೇಕ ಬಿಕ್ಕಟ್ಟು ಇದೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇದರ ಜೊತೆಗೆ ಆಧುನಿಕತೆ, ಶಿಕ್ಷಣ, ಉದ್ಯೋಗಕ್ಕೆ ಹೆಚ್ಚಿನ ಒತ್ತು ಕೊಡಬೇಕು" ಎಂದರು.
"ಈ ಹಿಂದೆ ಅಲೆಮಾರಿ, ಅರೆ-ಅಲೆಮಾರಿ ಜನಾಂಗದವರಿಗೆ ಸ್ಥಿರವಾದ ನೆಲೆ ಇರಲಿಲ್ಲ. ಈಗ ಸ್ಥಿರವಾಗಿ ನಿಂತಿದ್ದಾರೆ. 2011ರ ಜನಗಣತಿ ಪ್ರಕಾರ ಅನೇಕ ಅಲೆಮಾರಿ ಜನರ 10 ಲಕ್ಷಕ್ಕೂ ಹೆಚ್ಚು ಜನರ ಜಾತಿ ಗೊತ್ತಿರಲಿಲ್ಲ. ಅವರ ವಿಶೇಷತೆಗಳು ಗೊತ್ತಾಗಬೇಕಾದರೆ ಸಂಶೋಧನೆಗಳು ನಡೆಯಬೇಕು. ಭಾಷೆಗೆ-ಸಂಸ್ಕೃತಿಗೆ ಸಂಬಂಧಿಸಿದಂತೆ ಕೃತಿಗಳು ಹೆಚ್ಚಾಗಬೇಕು. ‘ಕೊಳ್ಳ’ ಕಾದಂಬರಿಯು ಬಂಜಾರ ಸಂಸ್ಕೃತಿಯ ಸೃಜನಶೀಲ ಕೋಶವಾಗಿದ್ದು, ಕೃತಿಗಳ ಲೇಖಕರಾದ ಡಾ.ಕೆ.ಬಿ. ಪವಾರ ಕನ್ನಡ ಸಾಹಿತ್ಯಕ್ಕೆ ಒಂದು ಮಹತ್ವದ ಕೃತಿ ಕೊಟ್ಟಿದ್ದಾರೆ" ಎಂದರು.
ಕಾರ್ಯಕ್ರಮದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಅಧ್ಯಕ್ಷ ಡಾ.ಎ.ಆರ್. ಗೋವಿಂದಸ್ವಾಮಿ, ಲೇಖಕರು ಹಾಗೂ ಸಾಹಿತ್ಯ ಪತ್ರಿಕೆಯ ಸಂಪಾದಕ ಆರ್.ಜಿ.ಹಳ್ಳಿ ನಾಗರಾಜ, ಹಿರಿಯ ಸಾಹಿತಿ ಹಾಗೂ ಅನುವಾದಕ ಪ್ರೊ. ಧರಣೇಂದ್ರ ಕುರಕುರಿ, ಕೃತಿಗಳ ಲೇಖಕರಾದ ಡಾ.ಕೆ.ಬಿ.ಪವಾರ ಹಾಗೂ ಅನೇಕ ಲೇಖಕರು, ಸಾಹಿತಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ಮಂಡ್ಯ 'ಪಯಣ'ದಲ್ಲಿ ವಿಂಟೇಜ್ ಕಾರುಗಳದ್ದೇ ಹವಾ; ನೀವೂ ಭೇಟಿ ನೀಡಿ ಈ ಮ್ಯೂಸಿಯಂಗೆ - Payana Vintage Museum