ಬೆಂಗಳೂರು: ಗೋವಾದಿಂದ ನಗರಕ್ಕೆ ಅಕ್ರಮವಾಗಿ ಸರಬರಾಜು ಮಾಡುತ್ತಿದ್ದ 50 ಲಕ್ಷ ಮೌಲ್ಯದ 16 ಸಾವಿರ ಮದ್ಯದ ಬಾಟಲ್ಗಳನ್ನ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಇಬ್ಬರನ್ನ ಬಂಧಿಸಿದ್ದಾರೆ. ಗೋವಾದಿಂದ ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಲಕ್ಷಾಂತರ ಮೌಲ್ಯದ ಮದ್ಯ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ನಗರದ ಮಹದೇವಪುರ ಹಾಗೂ ಕೆ.ಆರ್.ಪುರ ವಲಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ಕೈಗೊಂಡು 50 ಲಕ್ಷ ಮೌಲ್ಯದ 370 ಬಾಕ್ಸ್ನಲ್ಲಿದ್ದ 16 ಸಾವಿರ ಮದ್ಯದ ಬಾಟಲ್ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಾದಿಂದ ಬೆಳಗಾವಿ ಮಾರ್ಗವಾಗಿ ನಗರಕ್ಕೆ ಕ್ಯಾಂಟರ್ ವಾಹನದಲ್ಲಿ ಸಾಗಿಸುತ್ತಿದ್ದ ಚಾಲಕ ಅಮಿತ್ ಹಾಗೂ ಪರಮೇಶ್ ಎಂಬುವರನ್ನ ಬಂಧಿಸಲಾಗಿದೆ.
ಗೋವಾದಿಂದ ನಗರಕ್ಕೆ ಮದ್ಯ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಕಳೆದ 15 ದಿನಗಳಿಂದ ಅಬಕಾರಿ ಇಲಾಖೆಯ ಡಿಸಿ ವೀರಣ್ಣ ಬಾಗೇವಾಡಿ, ಡಿವೈಎಸ್ಪಿ ಮುಜಾವರ್ ಅಬೂಬಕರ್ ನೇತೃತ್ವದ ತಂಡ ರಚಿಸಲಾಗಿತ್ತು. ಇಂದು ಮುಂಜಾನೆ ಹೊಸಕೋಟೆಗೆ ಕಡೆ ಮಾಲ್ ಸಾಗಿಸುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆ ಕೆ.ಆರ್.ಪುರದಲ್ಲಿ ವಾಹನ ತಡೆದು ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಕೆಲ ಬ್ರಾಂಡ್ಗಳ ಹೆಸರಿನ ಮದ್ಯ ಬಾಟಲಿಗಳನ್ನು ಸರಬರಾಜು ಮಾಡುತ್ತಿದ್ದು, ಮೇಲ್ನೋಟಕ್ಕೆ ನಕಲಿ ಮದ್ಯ ಎಂಬುವುದು ತಿಳಿದು ಬಂದಿದೆ. ಸತ್ಯಾಸತ್ಯತೆ ಬಗ್ಗೆ ಪರಿಶೀಲಿಸಿದಾಗ ಅಸಲು ಅಥವಾ ನಕಲು ಎಂಬುದರ ಬಗ್ಗೆ ನಿಖರವಾಗಿ ಗೊತ್ತಾಗಲಿದೆ ಎಂದು ಅಬಕಾರಿ ಇಲಾಖೆಯ ದಕ್ಷಿಣ ವಿಭಾಗದ ಜಂಟಿ ಆಯುಕ್ತ ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಟಾರ್ಪೆಲ್ ಹೊದಿಸಿ ಮದ್ಯ ಸಾಗಾಟ ಮದ್ಯ ಬಾಟಲಿಗಳನ್ನ ನ್ಯಾಷನಲ್ ಡಿಸ್ಟ್ರಿಲರಿ ಕಂಪನಿಯಿಂದ ವಿತರಣೆ ಮಾಡಿರುವುದಾಗಿ ಬಾಕ್ಸ್ಗಳ ಮೇಲೆ ಹೆಸರು ನಮೂದಿಸಲಾಗಿದೆ. ಈ ಹೆಸರಿನಲ್ಲಿ ಅಸಲಿ ಕಂಪನಿ ಇದೆಯಾ ಎಂಬುದರ ಬಗ್ಗೆ ಗೋವಾಕ್ಕೆ ತೆರಳಿ ಪರಿಶೀಲಿಸಲಾಗುವುದು. ಅಲ್ಲದೇ ಬಾಟಲಿಗಳ ಮೇಲೆ ಬ್ರ್ಯಾಂಡ್ ಹೆಸರು ಸಹ ನಕಲಿಯಾಗಿರುವ ಸಾಧ್ಯತೆಯಿದೆ. ಆರೋಪಿಗಳು ಗೋವಾದಿಂದ ಬೆಳಗಾವಿ ಮಾರ್ಗವಾಗಿ ನಗರಕ್ಕೆ ಇಂದು ಬೆಳಗ್ಗೆ ಬಂದಿದ್ದು ಹೊಸಕೋಟೆಗೆ ಸಾಗಾಟ ಮಾಡುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ.
ನಿಖರವಾಗಿ ಯಾರಿಗೆ ಸಾಗಾಟ ಮಾಡುತ್ತಿರುವ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಸಬೇಕಿದೆ. ಯಾರಿಗೂ ಅನುಮಾನ ಬಾರದಿರಲು ಕ್ಯಾಂಟರ್ ಕೆಳಭಾಗ ಖಾಲಿ ಬಿಟ್ಟು, ಮೇಲ್ಭಾಗದಲ್ಲಿ ಮದ್ಯದ ಬಾಟಲಿ ಇರುವ 370 ಬಾಕ್ಸ್ ಇಟ್ಟು ಅದಕ್ಕೆ ಟಾರ್ಪೆಲ್ ಹೊದಿಸಿ ಪೊಲೀಸರನ್ನ ಯಮಾರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಅವಧಿ ಮೀರಿ ಪಾರ್ಟಿ, ರೆಸ್ಟೋಬಾರ್ ಲೈಸೆನ್ಸ್ ಅಮಾನತು