ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾ ಸಮಾವೇಶ ನಡೆಸಿದ್ದ ಪಂಚಮಸಾಲಿಗರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಳಕ್ಕೆ ಬಾರದ್ದನ್ನು ಖಂಡಿಸಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದರು. ಮಧ್ಯಾಹ್ನದಿಂದ ಶಾಂತಿಯುತವಾಗಿ ಜನರನ್ನು ತಡೆದು ನಿಲ್ಲಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬಳಿಕ ಸಂಘರ್ಷ ಯಾತ್ರೆ ಘೋಷಿಸಿದರು.
ಪೊಲೀಸ್ ವಾಹನಕ್ಕೆ ಕಲ್ಲು, ಲಾಠಿ ಪ್ರಹಾರ, ಹಲವರಿಗೆ ಗಾಯ: ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಪೊಲೀಸರು ಮೂರು ಬಾರಿ ಲಾಠಿ ಬೀಸಿದರು. ಕೆಲವರಿಗೆ ತಲೆಗೆ ಗಾಯವಾಗಿ ರಕ್ತ ಹೊರಬಂತು. ಮತ್ತೆ ಕೆಲವರ ಮೈ-ಕಾಲುಗಳಿಗೆ ಗಾಯಗಳಾದವು. ಪ್ರತಿಭಟನಾನಿರತರಲ್ಲಿ ಕೆಲವರು ಪೊಲೀಸ್ ವಾಹನಕ್ಕೆ ಕಲ್ಲು ತೂರಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಸ್ವಾಮೀಜಿ, ಯತ್ನಾಳ್ ಸೇರಿ ಹಲವರು ಹೆದ್ದಾರಿಯಲ್ಲೇ ಧರಣಿ ಕುಳಿತರು.
ಹೆದ್ದಾರಿಯಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪೊಲೀಸರು ಬ್ಯಾರಿಕೇಡ್ ಅಡ್ಡ ಇಟ್ಟು ವಾಹನಗಳನ್ನು ನಿಲ್ಲಿಸಿ ಜನರನ್ನು ತಡೆದರು. ಹೆದ್ದಾರಿ ತುಂಬಾ ಜನ ಹರಿದಾಡಿದರು. ನಾಲ್ಕು ಕಡೆ ವಾಹನಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿದರು. ಇದರ ನಡುವೆ ಸ್ವಾಮೀಜಿಯನ್ನು ಭೇಟಿ ಮಾಡಲು ಹೋದ ಹಿರಿಯ ಅಧಿಕಾರಿಗಳು, ಕೆಲವೇ ಜನರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಆಗುವಂತೆ ಮನವಿ ಮಾಡಿದರು. ಇದಕ್ಕೊಪ್ಪದ ಸ್ವಾಮೀಜಿ, ನಾವು ಶಾಂತಿಯುತವಾಗಿ ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಸಚಿವರಾದ ಹೆಚ್.ಸಿ.ಮಹಾದೇವಪ್ಪ, ವೆಂಕಟೇಶ, ಲಕ್ಷ್ಮಿ ಹೆಬ್ಬಾಳ್ಕರ್, ಡಾ.ಎಂ.ಸಿ.ಸುಧಾಕರ್ ಪ್ರತಿಭಟನಾ ವೇದಿಕೆಗೆ ಬಂದು ಮುಖ್ಯಮಂತ್ರಿಗಳ ಪರವಾಗಿ ಮನವಿ ಮಾಡಿದರು. ಹೋರಾಟದ ಉದ್ದೇಶವನ್ನು ಸಿಎಂ ಗಮನಕ್ಕೆ ತರುತ್ತೇವೆ, ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ತಿಳಿಸಿದರು. ಆಗ ಜನಸ್ತೋಮದಿಂದ ಭಾರೀ ಪ್ರಮಾಣದ ಕೂಗಾಟ, ಚೀರಾಟ, ಶಿಳ್ಳೆ-ಕೇಕೆಗಳು ಆರಂಭವಾದವು.
ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ: ಮುಖ್ಯಮಂತ್ರಿ ಸ್ಥಳಕ್ಕೆ ಬರಬೇಕು. ಇಲ್ಲವೇ ನಾವೇ ಸೌಧಕ್ಕೆ ಹೋಗುತ್ತೇವೆ ಎಂದು ಘೋಷಣೆ ಮೊಳಗಿಸಿದರು. ಆಗ ಸೌಧಕ್ಕೆ ಹೋಗೋಣ ನಡೆಯಿರಿ ಎಂದು ಸ್ವಾಮೀಜಿ ಹೇಳುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ನಾ ಮುಂದು, ತಾ ಮುಂದು ಎಂದು ಮುನ್ನುಗ್ಗಿದರು. ದಾರಿ, ಹೊಲ, ಸಿಕ್ಕ ಸಿಕ್ಕ ಜಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ತಲುಪಿದರು. ನಂತರ ಧರಣಿ ಮುಂದುವರೆಸಿ, ಮುಖ್ಯಮಂತ್ರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಸ್ವಾಮೀಜಿ, ಯತ್ನಾಳ್, ಅರವಿಂದ ಬೆಲ್ಲದ್, ಈರಣ್ಣ ಕಡಾಡಿ ಸೇರಿ ಮತ್ತಿತರರು ನಡು ರಸ್ತೆಯಲ್ಲೆ ಕುಳಿತಿದ್ದರು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಇದಕ್ಕೂ ಮುನ್ನ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣ ವಿಧಾನಸೌಧ ಬಳಿಯ ಕೊಂಡಸಕೊಪ್ಪ ಗುಡ್ಡದಲ್ಲಿ ಬೃಹತ್ ಸಮಾವೇಶ ಆರಂಭವಾಗಿದ್ದರಿಂದ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಬಸವಜಯ ಮೃತ್ಯುಂಜಯ ಸ್ವಾಮೀಜಿ ಪ್ರತಿಭಟನಾ ವೇದಿಕೆಗೆ ಆಗಮಿಸಿದ್ದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ಆಗಮಿಸಿ ಪಂಚಮಸಾಲಿ ಸಮಾವೇಶಕ್ಕೆ ಬೆಂಬಲ ಸೂಚಿಸಿದ್ದರು. ಮಾಜಿ ಸಚಿವ ಸಿ.ಸಿ.ಪಾಟೀಲ, ವಿಧಾನಸಭೆ ಉಪನಾಯಕ ಅರವಿಂದ ಬೆಲ್ಲದ, ಸಿದ್ದು ಸವದಿ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಬಳಿಕ ವಿಜಯೇಂದ್ರ ಅಲ್ಲಿಂದ ಸುವರ್ಣ ವಿಧಾನಸೌಧಕ್ಕೆ ತೆರಳಿದರು. ಇದಕ್ಕೂ ಮೊದಲು ವಿಜಯೇಂದ್ರ ವಿರುದ್ಧ ಯತ್ನಾಳ್ ಬೆಂಬಲಿಗರು ಧಿಕ್ಕಾರದ ಘೋಷಣೆ ಕೂಗಿದರು. ಇದರಿಂದ ಸಿಟ್ಟಿಗೆದ್ದ ಸಿದ್ದು ಸವದಿ ಧಿಕ್ಕಾರ ಕೂಗಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಹಿರೇಬಾಗೇವಾಡಿಯಲ್ಲಿ ಮುಖಂಡರು ವಶಕ್ಕೆ: ನಿಷೇಧದ ನಡುವೆಯೂ ಟ್ರ್ಯಾಕ್ಟರ್ ಮೂಲಕ ಸಮಾವೇಶಕ್ಕೆ ಬರುತ್ತಿದ್ದ 50ಕ್ಕೂ ಅಧಿಕ ಪಂಚಮಸಾಲಿ ಮುಖಂಡರನ್ನು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದರು. ಟ್ರ್ಯಾಕ್ಟರ್ ಜಾಥಾಗೆ ಅನುಮತಿ ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಹೋರಾಟಗಾರರನ್ನು ತಡೆದರು.

ನೆರೆದಿದ್ದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸಪಟ್ಟಿದ್ದು, ಈ ವೇಳೆ ಪೊಲೀಸರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರತಿಭಟನೆ ಕೈ ಮೀರಿ ಹೋಗಿದ್ದರಿಂದ ಪೊಲೀಸರು ಲಾಠಿ ಚಾರ್ಜ್ ಮಾಡಿದರು. ಈ ವೇಳೆ ಪ್ರತಿಭಟನಾಕಾರರು ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಜನರು ರಸ್ತೆ ಮೇಲೆ ಅಡ್ಡಾದಿಡ್ಡಿ ಓಡಾಡಿದರು. ನಂತರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅರವಿಂದ ಬೆಲ್ಲದ್ ಸೇರಿದಂತೆ ಹಲವರನ್ನ ಪೊಲೀಸರು ವಶಕ್ಕೆ ಪಡೆದರು.

'ಅಮಾಯಕರ ಮೇಲೆ ದೌರ್ಜನ್ಯ': ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, "ಈ ರೀತಿ ಸಮಾಜ ಬಾಂಧವರ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸರಿಯಲ್ಲ. ಅಮಾಯಕರ ಮೇಲೆ ದೌರ್ಜನ್ಯ ಮಾಡಿದ್ದಾರೆ. ಇದು ಬ್ರಿಟಿಷ್ ಸರ್ಕಾರ. ಪೊಲೀಸರ ಮೂಲಕ ಹೋರಾಟ ಹತ್ತಿಕ್ಕಲಾಗಿದೆ. ಸರ್ಕಾರ ಕೂಡಲೇ ಕ್ಷಮೆ ಕೇಳಬೇಕು. ಇದು ಕಾನೂನಿಗೆ ವಿರುದ್ಧವಾಗಿದ್ದು, ಸಂವಿಧಾನಕ್ಕೆ ಮಾಡಿದ ಅಪಮಾನವಾಗಿದೆ. ನಮ್ಮ ಹೋರಾಟದ ಶಕ್ತಿ ಕುಂದಿಸಲು ಸಾಧ್ಯವಿಲ್ಲ" ಎಂದು ಹೇಳಿದರು.
'ಹೋರಾಟ ಹತ್ತಿಕ್ಕಲು ನಮ್ಮದೇ ಸಮಾಜದ ಕೆಲ ಕಿಡಿಗೇಡಿಗಳ ಕೆಲಸ': ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, "ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರದಲ್ಲಿರುವ ನಮ್ಮದೇ ಸಮಾಜದ ಕೆಲ ಕಿಡಿಗೇಡಿಗಳು ಮಾಡಿಸಿದ ಕೆಲಸವಿದು. ಮುಂದಿನ ಹೋರಾಟದ ಬಗ್ಗೆ ಸ್ವಾಮೀಜಿ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ" ಎಂದರು.

ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, "ಕಾಂಗ್ರೆಸ್ ಆಡಳಿತವನ್ನು ಸಮುದಾಯ ನೆನಪಿಟ್ಟುಕೊಳ್ಳುತ್ತದೆ. ಅದಕ್ಕೆ ತಕ್ಕ ಶಾಸ್ತಿ ಕಲಿಸುತ್ತದೆ. ಲಿಂಗಾಯತ ಪಂಚಮಸಾಲಿ ಸಮುದಾಯದ ಪರವಾಗಿ ನನ್ನ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ಬೇರೆ ಸಮಾಜಕ್ಕೆ ಮೀಸಲಾತಿ ಇದೆ. ಆದರೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಏಕೆ ಮೀಸಲಾತಿ ಇಲ್ಲ ಎಂದು ಕೇಳುತ್ತಿದ್ದೇವೆ" ಎಂದರು.
2 ಗಂಟೆ ಸಂಚಾರ ಅಸ್ತವ್ಯಸ್ತ: ಇಂದಿನ ಪಂಚಮಸಾಲಿ ಪ್ರತಿಭಟನೆಯಲ್ಲಿ ಅಂದಾಜು 20 ಸಾವಿರಕ್ಕೂ ಅಧಿಕ ಜನ ಸೇರಿದ್ದರು. ಅಷ್ಟು ಜನ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದರಿಂದ ಟ್ರಾಫಿಕ್ ಉಂಟಾಯಿತು. ಎರಡು ಬದಿಯಲ್ಲಿ ಸುಮಾರು 30 ಕಿ.ಮೀ. ವರೆಗೆ ಸರತಿ ಸಾಲಿನಲ್ಲಿ ವಾಹನಗಳು ನಿಂತಿದ್ದವು. ವಾಹನ ಸವಾರರು 2 ಗಂಟೆಗೂ ಅಧಿಕ ಕಾಲ ರಸ್ತೆಯಲ್ಲೆ ಪರದಾಡಬೇಕಾಯಿತು.
ಇದನ್ನೂ ಓದಿ: 'ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ'