ಹಾಸನ: ಜೀವದ ಹಂಗು ತೊರೆದು ಲೈನ್ಮ್ಯಾನ್ ಒಬ್ಬರು ಹೇಮಾವತಿ ಜಲಾಶಯದ ನೀರಿನ ಮಧ್ಯೆ ವಿದ್ಯುತ್ ತಂತಿ ದುರಸ್ತಿ ಮಾಡಿ ಗಮನ ಸೆಳೆದಿದ್ದಾರೆ. ಲೈನ್ಮ್ಯಾನ್ ಹರೀಶ್ ಕುಮಾರ್ ಹೆಚ್.ವಿ. ತೆಪ್ಪದಲ್ಲಿ ತೆರಳಿ ವಿದ್ಯುತ್ ಕಂಬ ಏರಿ ರಿಪೇರಿ ಮಾಡಿದರು. ಈ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಹೌದು, ಹಾಸನ ಜಿಲ್ಲೆ, ಆಲೂರು ತಾಲ್ಲೂಕಿನ, ಮಣಿಗನಹಳ್ಳಿ, ಗ್ರಾಮದ ಬಳಿ ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯವನ್ನು ಮಾಡಬೇಕಿತ್ತು. ಹಂಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಣಿಗನಹಳ್ಳಿ ಗ್ರಾಮ ಗೊರೂರು ಜಲಾಶಯದ ಹಿನ್ನೀರಿನಲ್ಲಿ ಮಗ್ಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಕಡಬಗಾಲ ಕ್ರಾಸ್ ಮಾರ್ಗಕ್ಕೆ ಹಾದು ಹೋಗಿರುವ 11 ಕೆವಿ ವಿದ್ಯುತ್ ಮಾರ್ಗದ ಮಧ್ಯೆ ಇರುವ ವಿದ್ಯುತ್ ಕಂಬದಿಂದ ಪಿನ್ ಇನ್ಸುಲೇಟರ್ ಕಳಚಿ ಬಿದ್ದಿದ್ದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಆಡಚಣೆ ಉಂಟಾಗಿತ್ತು.
ಇದನ್ನು ಪರಿಶೀಲಿಸಿದ ಪಾಳ್ಯ ಶಾಖೆಯ ಸಹಾಯಕ ಮಾರ್ಗದಾಳು ಹೆಚ್.ವಿ. ಹರೀಶ್ ಕುಮಾರ್ಗೆ ದುರಸ್ತಿ ಮಾಡುವಂತೆ ಮಾರ್ಗದರ್ಶನ ನೀಡಿದ್ದ ಶಾಖೆಯ ಜೂನಿಯರ್ ಇಂಜಿನಿಯರ್ ಪ್ರಕಾಶ್ ನುರಿತ ಈಜುಗಾರರ ಜೊತೆ ತೆಪ್ಪದಲ್ಲಿ ಕಳುಹಿಸಿದ್ದರು. ಆ ಹಿನ್ನೆಲೆ ಹರೀಶ್ ಕುಮಾರ್ ನೀರಿನ ಮಧ್ಯೆ ವಿದ್ಯುತ್ ಕಂಬವೇರಿ ರಿಪೇರಿ ಮಾಡಿದರು. ಜಲಾಶಯ ಭರ್ತಿಯಾಗಿದ್ದರಿಂದ ದುರಸ್ತಿ ಮಾಡಲು ಹಲವು ಲೈನ್ಮ್ಯಾನ್ಗಳು ಹಿಂದೇಟು ಹಾಕಿದ್ದರು. ಆದರೆ, ಹರೀಶ್ ಕುಮಾರ್ ಸಾಹಸಕ್ಕೆ ಸಾರ್ವಜನಿಕರು ಶಹಬ್ಬಾಸ್ ಎಂದಿದ್ದಾರೆ.
ಇನ್ನು, ಲೈನ್ಮ್ಯಾನ್ ಹರೀಶ್ ಅವರಿಗೆ ಇಲಾಖೆಯಿಂದ ಸೇಫ್ಟಿ ಜಾಕೆಟ್ ಸೇರಿದಂತೆ ಮುಂಜಾಗ್ರತಾ ಕ್ರಮವನ್ನು ವಹಿಸಿದ ಮೇಲೆ ರಿಪೇರಿಗೆ ಕಳುಹಿಸಿಕೊಡಲಾಗಿತ್ತು. ಜೀವದ ಹಂಗು ತೊರೆದು ವಿದ್ಯುತ್ ತಂತಿ ಸರಿಪಡಿಸಿದ ಸೆಸ್ಕಾಂ ಸಿಬ್ಬಂದಿ ಹರೀಶ್ ಕೆಲಸಕ್ಕೆ ಇಲಾಖೆಯ ಸ್ನೇಹಿತ ವರ್ಗದವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.