ಮೈಸೂರು: ತುಂಗಭದ್ರಾ ಜಲಾಶಯದ ಗೇಟ್ನ ಚೈನ್ ಲಿಂಕ್ ಕಡಿತ ಸಂಬಂಧ ಉನ್ನತ ಮಟ್ಟದ ತನಿಖೆಯಾಗಬೇಕು. ಹೀಗಾಗಿ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ನಿರಂತರ ಮಳೆ. ಪ್ರವಾಹ ಬರುತ್ತಿದ್ದರು ಜಲಾಶಯಗಳ ಸುರಕ್ಷತೆ, ಪ್ರವಾಹ ಹಾನಿ ಬಗ್ಗೆ ಗಂಭೀರ ಚಿಂತನೆ ನಡೆಸದೆ ನಿರ್ಲಕ್ಷಿಸಿದ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಬೇಜವಾಬ್ದಾರಿತನ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳ 22 ಲಕ್ಷ ಹೆಕ್ಟೇರ್ನಲ್ಲಿ ಭತ್ತ ಬೆಳೆಯುತ್ತಿದ್ದ ರೈತರ ಬದುಕು ನಾಶವಾಗಲು ಕಾರಣವಾಗಿದೆ ಎಂದು ದೂರಿದರು.
ಕಳೆದ ಎರಡು ವರ್ಷಗಳಿಂದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ 70 ವರ್ಷಗಳ ಹಳೆಯ ಗೇಟ್‌ಗಳನ್ನು ಬದಲಾಯಿಸಬೇಕು, ಈ ಬಗ್ಗೆ ನಿಗಾ ವಹಿಸುವಂತೆ ಒತ್ತಾಯ ಮಾಡಿದ್ದರೂ ನಿರ್ಲಕ್ಷ್ಯ ಮಾಡಿದ ನೀರಾವರಿ ಇಲಾಖೆ ಈ ಘಟನೆಗೆ ಕಾರಣವಾಗಿದೆ. ರೈತರು ಬೆಳೆದ ಅನ್ನ ತಿನ್ನುವ ಅವಿವೇಕಿ ಜನಪ್ರತಿನಿಧಿಗಳಿಗೆ ರೈತರ ಸಂಕಷ್ಟ ಅರಿವಾಗುತ್ತಿಲ್ಲ. ಸ್ವಹಿತಾಸಕ್ತಿ ರಾಜಕೀಯವೇ ಮುಖ್ಯವಾಗಿರುವ ಕಾರಣ ರೈತರ ಬದುಕು ಬೀದಿ ಪಾಲಾಗುತ್ತಿದೆ. ಕಳೆದ ವರ್ಷ ಬರಗಾಲ ರೈತರನ್ನು ಕಾಡಿತ್ತು. ಈ ವರ್ಷ ಉತ್ತಮ ಮಳೆಯಾಗಿದೆ, ಜಲಾಶಯ ಭರ್ತಿಯಾಗಿದೆ. ಉತ್ತಮ ಬೆಳೆ ಬರುತ್ತದೆ ಎನ್ನುವ ರೈತರ ಸಂತೋಷ ಕಮರಿ ಹೋಗುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ನೀರಾವರಿ ಸಚಿವರು ಕಳೆದ ವರ್ಷ ಕಾವೇರಿ ಭಾಗದ ನೀರನ್ನು ಖಾಲಿ ಮಾಡಿ ರೈತರನ್ನ ಬಲಿಕೊಟ್ಟಾಗಿದೆ. ಇವರ ಬೇಜವಾಬ್ದಾರಿತನದಿಂದ ಈ ವರ್ಷ ಈ ಭಾಗದ ರೈತರು ಬಲಿಪಶು ಆಗಿದ್ದಾರೆ. ನೀರಾವರಿ ಸಚಿವರು ಕೂಡಲೇ ರಾಜೀನಾಮೆ ನೀಡಿ, ಪಕ್ಷದ ಅಧ್ಯಕ್ಷರಾಗಿ ರಾಜಕೀಯ ಮಾಡುವುದು ಒಳ್ಳೆಯದು ಎಂದು ಹೇಳಿದರು.
ಇದನ್ನೂ ಓದಿ: ತುಂಗಭದ್ರಾ ಜಲಾಶಯ ಗೇಟ್ ಪರಿಶೀಲಿಸಿದ ಡಿ ಕೆ ಶಿವಕುಮಾರ್; ಶೀಘ್ರದಲ್ಲೇ ಸಮಸ್ಯೆಗೆ ಪರಿಹಾರ- ಡಿಸಿಎಂ - DCM DK Shivakumar