ಸಕಲೇಶಪುರ(ಹಾಸನ): ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಕೊಲ್ಲಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಇಂದು ಮತ್ತೆ ಭೂ ಕುಸಿತ ಸಂಭವಿಸಿದೆ.
ಭಾರಿ ಮಳೆಯಿಂದಾಗಿ ಕೊಲ್ಲಹಳ್ಳಿ ಬಳಿ ತಡೆಗೋಡೆ ಕುಸಿತವಾಗಿದೆ. ಸುಮಾರು 25 ಅಡಿಗೂ ಹೆಚ್ಚು ಪ್ರಮಾಣದ ಮಣ್ಣು ಹಾಕಿ ನಿರ್ಮಿಸಿದ್ದ ರಸ್ತೆ ಇದಾಗಿದ್ದು, ಸೂಕ್ತ ತಡೆಗೋಡೆ ನಿರ್ಮಿಸದ ಕಾರಣ ಮಣ್ಣು ಕೊಚ್ಚಿ ಹೋಗುತ್ತಿದೆ. 500 ಮೀಟರ್ ಉದ್ದಕ್ಕೆ ರಸ್ತೆಗೆ ಹೊಂದಿಕೊಂಡ ತಡೆಗೋಡೆ ಕುಸಿಯುತ್ತಿದ್ದು, ಮಳೆ ಹೆಚ್ಚಾದರೆ ಚತುಷ್ಪಥ ರಸ್ತೆಯ ಒಂದು ಭಾಗದ ಕಾಂಕ್ರಿಟ್ ರಸ್ತೆಯೇ ಕೊಚ್ಚಿ ಹೋಗುವ ಆತಂಕ ಎದುರಾಗಿದೆ.
ಮತ್ತೊಂದೆಡೆ, ಹೊಳೆಮಲ್ಲೇಶ್ವರ ದೇವಸ್ಥಾನದ ಊಟದ ಹಾಲ್ ಮೇಲೆ ಒಣಗಿದ ಮರದ ತುಂಡು ಬಿದ್ದು ಮೇಲ್ಛಾವಣಿ ಜಖಂಗೊಂಡಿದೆ.
ಅಪರಿಚಿತ ವಾಹನ ಡಿಕ್ಕಿ, ಜಿಂಕೆ ಸಾವು: ಅಪರಿಚಿತ ವಾಹನ ಡಿಕ್ಕಿಯಾಗಿ ಜಿಂಕೆಯೊಂದು ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಹಳೆಹೊಂಕರವಳ್ಳಿ ಗ್ರಾಮದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಬುಧವಾರ ಮುಂಜಾನೆ ರಸ್ತೆ ದಾಟುತ್ತಿದ್ದ ವೇಳೆ ವಾಹನ ಡಿಕ್ಕಿಯಾಗಿದ್ದರಿಂದ ಜಿಂಕೆ ತಲೆಗೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಶೀಲಿಸಿದ ನಂತರ ಜಿಂಕೆ ಶವವನ್ನು ವಶಕ್ಕೆ ಪಡೆದು ಪಶು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ತುಂಗಾ ಅಣೆಕಟ್ಟೆಗೆ 50 ಸಾವಿರ ಕ್ಯೂಸೆಕ್ ಒಳಹರಿವು: ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತ - Tunga Dam