ಬೆಳಗಾವಿ: ರಾಜ್ಯದ ಮಹಿಳೆಯರನ್ನು ನಾನು ಪ್ರತಿನಿಧಿಸುತ್ತೇನೆ. ನಾಲಿಗೆ ಮೇಲೆ ಹಿಡಿತ ಇರಬೇಕು, ವೇದಿಕೆ ಮೇಲೆ ಇದ್ದವರು ಏಕೆ ತಡೆಯಲಿಲ್ಲ. ಇಲ್ಲವೇ ಸಂಜಯ ಪಾಟೀಲ್ ಮೂಲಕ ಮಾತನಾಡಿಸಿದ್ದಾರಾ..? ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಹೇಳಿಕೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ಮಾಜಿ ಶಾಸಕ ಸಂಜಯ್ ಪಾಟೀಲ್ ಅವರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡುತ್ತಾ, 'ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದೀರಿ. ಅದರಿಂದ ಅವರಿಗೆ ಇಂದು ನಿದ್ದೆ ಬರುದಿಲ್ಲ. ಹೀಗಾಗಿ ಇಂದು ರಾತ್ರಿ ಮಾತ್ರೆ ಜತೆಗೆ ಒಂದು ಎಕ್ಸ್ಟ್ರಾ ಪೆಗ್ ಹೊಡಿಬೇಕು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಕುರಿತು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸಂಜಯ್ ಪಾಟೀಲ್ ನನಗೆ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಇದು. ನಾನು ಲಿಂಗಾಯತ ಸಮಾಜದ ಹೆಣ್ಣುಮಗಳು. ಲಿಂಗಾಯತ ಸಮಾಜಕ್ಕೆ ಮಾಡಿದ ಅವಮರ್ಯಾದೆ ಇದು. ಇಡೀ ರಾಜ್ಯದ ಮಹಿಳೆಯರಿಗೆ ಧಿಕ್ಕರಿಸಲು ಕರೆ ಕೊಡುತ್ತೇನೆ. ಮಹಿಳೆಯ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಮಹಿಳೆಯರ ಸಬಲೀಕರಣ ವಿರೋಧಿಗಳು ಬಿಜೆಪಿಯವರು. ಗ್ಯಾರಂಟಿ ಯೋಜನೆಯ ಬಗ್ಗೆಯೂ ವಿರೋಧ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಮಕ್ಕಳು ಹುಟ್ಟಿದರೂ ಗ್ಯಾರಂಟಿ ಕಾರಣ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಲಕ್ಷ್ಮೀ ಹೆಬ್ಬಾಳ್ಕರ್, ನಿಮ್ಮ ತರಹ ನಾನು ಟಾಂಟ್ ಹೊಡೆಯೋದಿಲ್ಲ. ಎಸಿ ರೂಮಿನಲ್ಲಿ ಕುಳಿತಿರುವ ನಿಮಗೆ 2 ಸಾವಿರ ರೂ. ಅರಿವಿಲ್ಲ. ಇನ್ನು ಕುಮಾರಸ್ವಾಮಿ ಅವರೂ ಹಿರಿಯರು. ಗೃಹಲಕ್ಷ್ಮಿಯ ಲಾಭ ಪಡೆಯುವ ಯಾವ ಹಳ್ಳಿಯ ಮಹಿಳೆ ದಾರಿ ತಪ್ಪಿದ್ದಾರೆ ಎಂದು ಸ್ಪಷ್ಟಪಡಿಸಲಿ. ಹಳ್ಳಿಯ ಹೆಣ್ಣುಮಕ್ಕಳ ಬಗ್ಗೆ ಯಾಕೆ ಇಷ್ಟು ಹಗುರವಾಗಿ ಮಾತನಾಡಿದ್ದಾರೆ ಎಂದು ಖಾರವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆ ಜಾರಿ ಮಾಡಿಲ್ಲ. ಬಿಜೆಪಿಯ ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ. ಬರೀ ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾ ಆಗಿದೆ. ಸಮಾಜ ನನ್ನ ಜೊತೆಗೆ ಇದೆ, ಇಡೀ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಜೊತೆಗೆ ಇದ್ದಾರೆ. ಚಿಕ್ಕೋಡಿ, ಬೆಳಗಾವಿ ಲೋಕಸಭಾ ಕ್ಷೇತ್ರ ಗೆಲ್ಲುವುದು ನಮ್ಮ ಉದ್ದೇಶವಾಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಲೋಕಸಭಾ ಚುನಾವಣೆ ಮುಗಿದ ಬಳಿಕ ಕೇಂದ್ರ, ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂಬ ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಾವು ರಾಜ್ಯದಲ್ಲಿ 135 ಸ್ಥಾನಗಳನ್ನು ಗೆದ್ದಿದ್ದೇವೆ. ಅವರು ಸುಮ್ಮನೆ ಹಗಲು ಕನಸು ಕಾಣುತ್ತಿದ್ದಾರೆ, ನಾವೇನು ಸುಮ್ಮನೆ ಕುಳಿತುಕೊಳ್ಳಲ್ಲ ಎಂದು ತಿರುಗೇಟು ನೀಡಿದರು. 2ಎ ಮೀಸಲಾತಿ ಕೊಡಿಸಿದರೆ ಒಂದು ಕೆಜಿ ಚಿನ್ನ ನೀಡುವುದಾಗಿ ಮಾಜಿ ಸಚಿವ ನಿರಾಣಿ ಸವಾಲು ಹಾಕಿರುವ ವಿಚಾರಕ್ಕೆ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಮಾತನಾಡುತ್ತೇನೆ. ಈ ಸಂಬಂಧ ಈಗಾಗಲೇ ನಮ್ಮ ಸಮಾಜ ಪ್ರತಿಕ್ರಿಯೆ ಕೊಟ್ಟಿದೆ ಎಂದು ಹೇಳಿದರು.