ಮಂಡ್ಯ/ಮೈಸೂರು: ಹಳೇ ಮೈಸೂರು ಭಾಗದ ಕೆಆರ್ಎಸ್ ಹಾಗೂ ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಕೆಆರ್ಎಸ್ ಜಲಾಶಯದಿಂದ ಹೆಚ್ಚುವರಿ ನೀರನ್ನು ಹೊರಗೆ ಬಿಡಲಾಗುತ್ತಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
124.80 ಅಡಿ ಸಾಮರ್ಥ್ಯದ ಕನ್ನಡಿಗರ ಜೀವನಾಡಿ ಕೆಆರ್ಎಸ್ ಜಲಾಶಯ ಎರಡು ವರ್ಷದ ನಂತರ ಇಂದು ಸಂಪೂರ್ಣವಾಗಿ ಭರ್ತಿಯಾಗಿದೆ. ಜಲಾಶಯದಿಂದ 50 ಸಾವಿರದಿಂದ 80 ಸಾವಿರ ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದ್ದು, ನದಿ ಪಾತ್ರದ ತಗ್ಗು ಪ್ರದೇಶಗಳಲ್ಲಿ ಇರುವ ಜನರು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಹಾಗೂ ತಮ್ಮ ಆಸ್ತಿ-ಪಾಸ್ತಿಗಳ ರಕ್ಷಣೆಗೆ ಎಚ್ಚರಿಕೆ ವಹಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕೆಆರ್ಎಸ್ ಭರ್ತಿಯಿಂದ ಸಮಸ್ಯೆ ಪರಿಹಾರ: ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುವ ಮೂಲಕ ತಮಿಳುನಾಡಿಗೆ ನೀರಿನ ಸಮಸ್ಯೆ ಪರಿಹಾರ ಜತೆಗೆ ಕುಡಿಯುವ ನೀರಿಗೆ, ರೈತರಿಗೆ, ಬೇಸಾಯಕ್ಕೆ ಎಲ್ಲಾ ರೀತಿಯಾ ಸಮಸ್ಯೆಗಳು ಪರಿಹಾರ ಆಗಿದೆ ಎನ್ನಬಹುದಾಗಿದೆ. ಜುಲೈ ತಿಂಗಳ ಮೊದಲ ವಾರದಿಂದ ಎಡೆಬಿಡದೆ ಸುರಿದ ಮುಂಗಾರು ಮಳೆಯ ಪರಿಣಾಮ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದು ಅದರಲ್ಲೂ, ಜೀವ ನದಿ ಕಾವೇರಿಗೆ ನಿರ್ಮಿಸಿರುವ ಕೆಆರ್ಎಸ್ ಜಲಾಶಯ ಹಾಗೂ ಹೆಚ್.ಡಿ.ಕೋಟೆ ತಾಲೂಕು ಕಬಿನಿ ಜಲಾಶಯ ಭರ್ತಿಯಾಗುವ ಮೂಲಕ ನೀರಿನ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಕ್ಕಿದೆ.
ಕೆಆರ್ಎಸ್ ಜಲಾಶಯ ಭರ್ತಿಯಾಗಿದ್ದು, ಮುಂದಿನ ವಾರ ಮುಖ್ಯಮಂತ್ರಿಗಳು ಕಬಿನಿ ಹಾಗೂ ಕೆಆರ್ಎಸ್ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದಾರೆ. ಒಂದೆರೆಡು ದಿನಗಳಲ್ಲಿ ಈ ಬಗ್ಗೆ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ.
ತುಂಬಿದ ಕಬಿನಿ: ಹೆಚ್.ಡಿ.ಕೋಟೆ ತಾಲೂಕಿನ ಬಿಚ್ಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯ ರಾಜ್ಯದಲ್ಲಿ ಬಹು ಬೇಗ ತುಂಬುವ ಜಲಾಶಯವೆಂಬ ಕೀರ್ತಿಗೆ ಹೆಸರಾಗಿದೆ. ಇದಕ್ಕೆ ಕಾರಣ ಕೇರಳದ ವೈಯಾನಾಡುವಿನಲ್ಲಿ ಸುರಿಯುವ ಮುಂಗಾರು ಮಳೆ. 2,284 ಅಡಿ ಎತ್ತರವಿರುವ ಕಬಿನಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಕಳೆದ ವಾರದಿಂದ ಕಪಿಲಾ ನದಿಗೆ ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗಿದೆ. ಆ ಮೂಲಕ ತಮಿಳುನಾಡಿಗೆ ಪ್ರತಿದಿನ 1 ಟಿಎಂಸಿ ನೀರು ಬೀಡಬೇಕೆಂಬ ಆದೇಶವನ್ನು ಪೂರ್ತಿ ಮಾಡಿದ ಹೆಗ್ಗಳಿಕೆ ಕಬಿನಿ ಜಲಾಶಯಕ್ಕೆ ಸಲ್ಲುತ್ತದೆ.
'ಬಹುತೇಕ ಕಾವೇರಿ ಸಮಸ್ಯೆ ಎದುರಾದಾಗ ಕೆಆರ್ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆ ಇದ್ದಾಗ ಕಬಿನಿ ಜಲಾಶಯದಿಂದ ನೀರು ಬಿಡುವ ಮೂಲಕ ಸಮಸ್ಯೆ ಬಗೆಹರಿಸುವುದರಿಂದ ಕಬಿನಿ ಜಲಾಶಯ ಕರ್ನಾಟಕದ ಪಾಲಿಗೆ ಆಪತ್ಬಾಂಧವ' ಎಂದು ಹೆಚ್.ಡಿ.ಕೋಟೆಯ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಈ ಟಿವಿ ಭಾರತ್ ಜತೆ ಮಾತನಾಡಿ ಮಾಹಿತಿ ಹಂಚಿಕೊಂಡರು.
ಕಾವೇರಿ ನದಿಯಲ್ಲಿ ಪ್ರವಾಹ ಭೀತಿ: ಬಹುತೇಕ ಭರ್ತಿಯಾಗಿರುವ ಕೆಆರ್ಎಸ್ ಜಲಾಶಯದ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಇದರಿಂದ ಜಲಾಶಯದ ಹಿಂಭಾಗದಲ್ಲಿರುವ ಬೃಂದಾವನ ಸಂಪೂರ್ಣ ಮುಳುಗಡೆಯಾಗಿದೆ. ಶ್ರೀರಂಗಪಟ್ಟಣದ ಸೇತುವೆ ಬಳಿ ಭಾರೀ ಪ್ರಮಾಣ ನೀರು ಒಳ ಹೋಗುತ್ತಿದೆ. ಇದರಿಂದ ಶ್ರೀರಂಗಪಟ್ಟಣದ ಬಳಿಯಿರುವ ಹಳೆ ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ರಂಗತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರ ರದ್ದು ಮಾಡಲಾಗಿದೆ. ಜೊತೆಗೆ ಟಿ.ನರಸೀಪುರ ಬಳಿಯ ತ್ರೀವೇಣಿ ಸಂಗಮದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಂಗಮದಲ್ಲಿ ಯಾರು ಸೇತುವೆ ಬಳಿ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ.
ನೀರಿನ ರಭಸಕ್ಕೆ ಕುಸಿದ KRS ತಡೆಗೋಡೆ: ನೀರು ಭರ್ತಿಯಾಗಿ ಕನ್ನಂಬಾಡಿ ಅಣೆಕಟ್ಟು ಬಳಿಯ ತಡೆಗೋಡೆ ಕುಸಿತವಾಗಿದೆ. ಅಣೆಕಟ್ಟಿಗೆ ಒಳ ಹರಿವಿನ ಪ್ರಮಾಣ ಅಧಿಕವಾದ್ದರಿಂದ ಸುರಕ್ಷತೆ ದೃಷ್ಟಿಯಿಂದ ಡ್ಯಾಂನಿಂದ ಹೊರ ಹರಿವಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿತ್ತು. ಡ್ಯಾಂನಿಂದ ನದಿಗೆ ನೀರು ಬಿಟ್ಟ ಪರಿಣಾಮ ನೀರಿನ ರಭಸಕ್ಕೆ KRSನ ತಡೆಗೋಡೆ ಕುಸಿದಿದೆ. ಅಣೆಕಟ್ಟೆಗೆ ಹೊಂದಿಕೊಂಡಂತೆ ನಗುವನ ಇದೆ. ಡ್ಯಾಂನಿಂದ ನದಿಗೆ ನೀರು ಬಿಟ್ಟಾಗ ನಗುವನಕ್ಕೆ ತೊಂದರೆ ಆಗದಂತೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಆದರೆ ನದಿಗೆ ನೀರು ಬಿಡುತ್ತಿದ್ದಂತೆ ನೀರಿನ ರಭಸಕ್ಕೆ ನಗುವನ ತೋಟದ ತಡೆಗೋಡೆ ಕುಸಿದಿದೆ. ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ನೀರು ಬಿಡುಗಡೆ ನಿಲ್ಲಿಸಿದ್ದಾರೆ. ಇಲ್ಲದಿದ್ದರೇ ಭಾಗಶಃ ತಡೆಗೋಡೆ ಕೊಚ್ಚಿ ಹೋಗುತ್ತಿತ್ತು.