ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಭ್ರಮ - ಸಡಗರದಿಂದ ಆಚರಿಸಲಾಗುತ್ತಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮನೆ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ದೇವರ ಮನೆಗಳನ್ನು ಹೂವಿನಿಂದ ಅಲಂಕರಿಸಿ ಮತ್ತು ಕೊಟ್ಟಿಗೆ, ಮೂಡೆ, ಪಾಯಸಗಳನ್ನು ತಯಾರಿಸಿ ಶ್ರೀಕೃಷ್ಣನಿಗೆ ನೈವೇದ್ಯ ಅರ್ಪಿಸಿ, ಎಲ್ಲಾ ಕಷ್ಟ ಕಳೆದು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಲಾಗುತ್ತಿದೆ.
ತಾಯಂದಿರು ಮಕ್ಕಳಿಗೆ ಶ್ರೀಕೃಷ್ಣನ ವೇಷ ತೊಡಿಸಿ ಸಂತಸಪಡುತ್ತಿದ್ದಾರೆ. ಈ ಕುರಿತು ಶುಭಲಕ್ಷ್ಮೀ ಮಾತನಾಡಿ, " ಕೃಷ್ಣ ವೇಷ ಹಾಕುವುದು ತುಂಬಾ ಖುಷಿಯಾಗುತ್ತದೆ. ಮಕ್ಕಳಿಗೆ ಅಂದಚೆಂದ ಮಾಡಿ ನೋಡುವುದು ತುಂಬಾ ಸಂತಸವಾಗುತ್ತಿದೆ. ಎಲ್ಲಾ ಮಕ್ಕಳು ಕೃಷ್ಣ ಸ್ವರೂಪನೆ. ನಾನು ಮೂರು ವರ್ಷದಿಂದ ಮಗುವಿಗೆ ಕೃಷ್ಣನ ವೇಷ ಹಾಕುತ್ತಿದ್ದೇನೆ" ಎಂದರು.
ಕದ್ರಿ ದೇಗುಲದಲ್ಲಿ ಕೃಷ್ಣ ವೇಷ ಸ್ಪರ್ಧೆ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ನಾಲ್ಕು ದಶಕಗಳಿಂದ (42ವರ್ಷ) ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವದಲ್ಲಿ"ಶ್ರೀ ಕೃಷ್ಣ ವೇಷ ಸ್ಪರ್ಧೆ"ಯನ್ನು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ. ಇಂದು ಬೆಳಗ್ಗೆ 9 ರಿಂದ ಶ್ರೀ ಕೃಷ್ಣ ವರ್ಣ ವೈಭವ, ಮಧ್ಯಾಹ್ನ 12 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 1 ಗಂಟೆಗೆ ಸರಿಯಾಗಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ನಂದಗೋಕುಲ ವೇದಿಕೆಯಲ್ಲಿ ನಡೆಯುತ್ತಿದೆ.
ರಾತ್ರಿ 12 ರ ತನಕ ವಿವಿಧ ಸ್ಪರ್ಧೆಗಳನ್ನು ಒಟ್ಟು 42 ವಿಭಾಗಗಳಲ್ಲಿ, 9 ವೇದಿಕೆಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿದೆ ಮತ್ತು ಮಧ್ಯಾಹ್ನ 12 ರಿಂದ ರಾತ್ರಿ 12ರ ವರೆಗೆ ವಿವಿಧ ಸಾಹಿತ್ಯಕ - ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ನಡೆಸಲಾಗುತ್ತಿದೆ. ರಾತ್ರಿ 12 ಗಂಟೆಗೆ ಅರ್ಘ್ಯ ಪ್ರದಾನ - ಪ್ರಸಾದ ವಿತರಣೆಯೊಂದಿಗೆ ಸಂಪನ್ನವಾಗಲಿದೆ. ಇಂದು ಮುಂಜಾನೆ ಪಂಡರಪುರ ಕೃಷ್ಣ ನೃತ್ಯ, ಯಕ್ಷ ಕೃಷ್ಣ ನೃತ್ಯ ಸಂಭ್ರಮದಿಂದ ನಡೆದವು.