ಬೆಂಗಳೂರು: ನಂದಿನಿ ಹಾಲಿನ ದರವನ್ನು ಲೀಟರ್‌ಗೆ 5 ರೂಪಾಯಿ ಹೆಚ್ಚಿಸುವಂತೆ ರೈತರು ಹಾಗೂ ಹಾಲು ಉತ್ಪಾದಕರು ಒತ್ತಾಯಿಸಿದ್ದಾರೆ. ಚಳಿಗಾಲದ ಅಧಿವೇಶನದ ಬಳಿಕ ಈ ಕುರಿತು ಸಿಎಂ, ಡಿಸಿಎಂ ಹಾಗೂ ಸಹಕಾರ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ತಿಳಿಸಿದ್ದಾರೆ.
ಈಗಾಗಲೇ ದೈನಂದಿನ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಕೆಎಂಎಫ್ ನಂದಿನಿ ಹಾಲಿನ ದರ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಪ್ರತಿ ಲೀಟರ್‌ಗೆ ಹೆಚ್ಚುವರಿಯಾಗಿ 50 ಎಂಎಲ್ ನೀಡಿ 2 ರೂಪಾಯಿ ಏರಿಕೆ ಮಾಡಲಾಗಿತ್ತು. ಆಗ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22 ರಿಂದ 24 ರೂಪಾಯಿಗೆ ಏರಿಕೆಯಾಗಿತ್ತು. ಒಂದು ಲೀಟರ್ ಹಾಲಿನ ದರ 42 ರಿಂದ 44 ರೂಪಾಯಿಗೆ ಏರಿಕೆಯಾಗಿತ್ತು.
ಕೆಲ ದಿನಗಳ ಹಿಂದೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಹಾಲಿನ ದರ ಏರಿಕೆಯ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದರು. ಆದರೆ, ಇದೀಗ ಭೀಮಾ ನಾಯ್ಕ್ ಅವರು ಚಳಿಗಾಲದ ಅಧಿವೇಶನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎನ್ನುವ ಹೇಳಿಕೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ದೋಸೆ ಹಿಟ್ಟು ಉತ್ಪನ್ನ ಮಾರಾಟ ಮಾಡುತ್ತೇವೆ : ದೋಸೆ ಹಿಟ್ಟು ಮಾರಾಟದಲ್ಲಿ ನಮಗೆ ಆಹಾರ ಇಲಾಖೆಯಿಂದ ಕೆಲವು ಅಂಶಗಳ ಸೇರ್ಪಡೆಗೆ ಸೂಚನೆ ಇದೆ. ಆ ಬಗ್ಗೆ ನಾವೂ ಸಭೆ ಮಾಡಿದ್ದೇವೆ. ಶೀಘ್ರದಲ್ಲೇ ದೋಸೆ ಹಿಟ್ಟು ಉತ್ಪನ್ನ ಮಾರಾಟ ಮಾಡುತ್ತೇವೆ. ನಮಗೆ ತಿರುಪತಿಯಲ್ಲಿ ಆದ ಅಡ್ಡಿಯಿಂದ ಅನ್ಯ ರಾಜ್ಯದಲ್ಲಿ ದೋಸೆ ಹಿಟ್ಟು ಮಾರಾಟಕ್ಕೆ ಹಿಂದೇಟು ಹಾಕಿದ್ದೆವು. ಆದರೆ ಲಾಭಿ, ಒತ್ತಡ ನಮ್ಮ ಮೇಲೆ ಇಲ್ಲ. ಇಲ್ಲದ ಆರೋಪ ಬಿಜೆಪಿ ಮಾಡುತ್ತಿದೆ ಎಂದಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲೂ ಕೂಡಾ ವಿನಾಕಾರಣ ರಾಜಕಾರಣ ಮಾಡಿ ಜನರಿಗೆ ತಪ್ಪು ಸಂದೇಶ ಹೋಗುವಂತೆ ನಡೆದುಕೊಳ್ಳಲಾಗುತ್ತಿದೆ. ನಾವೂ ಯಾವುದೇ ಒತ್ತಡಕ್ಕೆ ಮಣಿದಿಲ್ಲ. ಕೆಎಂಎಫ್ ಎಂಡಿ ವರ್ಗಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಬಿಜೆಪಿಯವರು ಮೊದಲು ಯತ್ನಾಳ್ ಬಾಯಿ ಮುಚ್ಚಿಸಲಿ. ನಿಮ್ಮಲ್ಲಿರುವ ಒಡಕು ಸರಿಪಡಿಸಿಕೊಳ್ಳೋದನ್ನ ನೋಡಿ. ಬದಲಾಗಿ ಕೆಎಂಎಫ್ ಸಂಸ್ಥೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ರೈತರಿಗೆ ಅನುಕೂಲವಾಗುವುದು ವಿಪಕ್ಷಗಳಿಗೆ ಇಷ್ಟವಿಲ್ಲ, ಅನ್ನದಾತರಿಗೆ ಸಹಾಯ ಮಾಡಲು ಹಾಲಿನ ದರ ಏರಿಕೆ: ಸಿಎಂ - CM ON MILK PRICE HIKE