ಬೆಂಗಳೂರು: ಕಿಯೋನಿಕ್ಸ್ ಸೇರಿದಂತೆ ವಿವಿಧ ನಿಗಮ-ಮಂಡಳಿಗಳಲ್ಲಿನ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2023ರ ಅಕ್ಟೋಬರ್ 28ರಿಂದ ನವೆಂಬರ್ 25ರವರೆಗೆ ನಡೆಸಿದ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ, ಕೆಇಎ ವೆಬ್ಸೈಟ್ನಲ್ಲಿನ ಲಿಂಕ್ಗೆ ಹೋಗಿ ಫಲಿತಾಂಶ ಪಡೆಯಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಗಳ ಒಟ್ಟು 670 ಖಾಲಿ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿತ್ತು. ಈ ಎಲ್ಲ ಪರೀಕ್ಷೆಗಳಿಗೆ ಅಂದಾಜು 17.5 ಲಕ್ಷ ಅರ್ಜಿಗಳು ಬಂದಿದ್ದವು. ಅನೇಕರು, ವಿವಿಧ ಹುದ್ದೆಗಳಿಗೆ ಒಂದಕ್ಕಿಂತ ಹೆಚ್ವು ಅರ್ಜಿಗಳನ್ನು ಸಲ್ಲಿಸಿದ್ದ ಕಾರಣ ಅವುಗಳ ಸಂಖ್ಯೆ ಜಾಸ್ತಿಯಾಗಿತ್ತು. 8 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇದೀಗ ಫಲಿತಾಂಶದೊಂದಿಗೆ ಅಂಕಗಳನ್ನೂ ಪ್ರಕಟಿಸಲಾಗಿದೆ.
ಆಕ್ಷೇಪಣೆ ಸಲ್ಲಿಸಲು ಅವಕಾಶ: ಕೆಇಎ ವೆಬ್ಸೈಟ್ನಲ್ಲಿರುವ ಲಿಂಕ್ ಒತ್ತಿ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಫಲಿತಾಂಶದ ವಿವರಗಳನ್ನು ಪಡೆಯಬಹುದು. ಒಂದು ವೇಳೆ ಫಲಿತಾಂಶ ಸಿಗದೇ ಇದ್ದಲ್ಲಿ ಅದೇ ಲಿಂಕ್‌ನಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆಕ್ಷೇಪಣೆಯನ್ನು ಪರಿಶೀಲಿಸಿ ಫಲಿತಾಂಶ ನೀಡಲಾಗುತ್ತದೆ. ಫಲಿತಾಂಶಗ ಕುರಿತ ಯಾವುದೇ ಆಕ್ಷೇಪಣೆ ಇದ್ದರೂ ಲಿಂಕ್ ಮೂಲಕವೇ ಸಲ್ಲಿಸಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ತಿಳಿಸಿದ್ದಾರೆ.
ಇದನ್ನೂ ಓದಿ: ಗೂಗಲ್ನಿಂದ ಉಚಿತ AI ಕೋರ್ಸ್‌ಗಳು; ಕಲಿತರೆ ಉದ್ಯೋಗ ಪಡೆಯಲು ಹೆಚ್ಚು ಅನುಕೂಲ