ಬೆಂಗಳೂರು: ಆದಾಯ ಮೂಲಗಳಿಗಿಂತ ಅಧಿಕ ಹಾಗೂ ಅಸಮತೋಲನ ಆಸ್ತಿ ಹೊಂದಿದ್ದ 8 ಸರ್ಕಾರಿ ಅಧಿಕಾರಿಗಳ ಮನೆಗಳು ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ರೂ. ಮೌಲ್ಯದ ಆಸ್ತಿ ವಿವರಗಳನ್ನು ಪತ್ತೆ ಹಚ್ಚಿದ್ದಾರೆ. ಬೆಳಗಾವಿ, ಹಾವೇರಿ, ದಾವಣಗೆರೆ, ಬೀದರ್, ಮೈಸೂರು, ರಾಮನಗರ ಮತ್ತು ಧಾರವಾಡ ಜಿಲ್ಲೆಗಳ 37 ಸ್ಥಳಗಳಲ್ಲಿ ಮಂಗಳವಾರ ಏಕಕಾಲದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು.
- ನಿಪ್ಪಾಣಿ ತಾಲೂಕಿನ ಬೋರೆಗಾವ್ ಗ್ರಾಮದ ಗ್ರಾಮ ಆಡಳಿತಾಧಿಕಾರಿ ವಿಠ್ಠಲ್ ಶಿವಪ್ಪ ಧವಳೇಶ್ವರ ಅವರ ಬಳಿ 1 ವಾಸದ ಮನೆ, 4 ಎಕರೆ ಕೃಷಿ ಜಮೀನು, ಆಭರಣ, ವಾಹನಗಳು ಸೇರಿ ಒಟ್ಟು 1.08 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
- ಬೀದರ್ನ ತರಬೇತಿ ಸಂಸ್ಥೆಯ ಉಪ ನಿರ್ದೇಶಕ (ಉಪ-ತಹಸೀಲ್ದಾರ್) ರವೀಂದ್ರ ಕುಮಾರ್ ಬಳಿ 7 ನಿವೇಶನ, 5 ವಾಸದ ಮನೆ, 10 ಎಕರೆ ಕೃಷಿ ಜಮೀನು, 27 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 12 ಲಕ್ಷ ರೂ.ಗಳ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 4.22 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ.
- ಕೋರಮಂಗಲ ವಾಣಿಜ್ಯ ತೆರಿಗೆ ಇಲಾಖೆಯ ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ವೆಂಕಟೇಶ್ ಎಸ್.ಮಜುಂದಾರ್ ಬಳಿ 2 ವಾಸದ ಮನೆಗಳು, 1 ಗ್ಯಾಸ್ ಗೋದಾಮು, 1 ಎಕರೆ ಕೃಷಿ ಜಮೀನು, 39,31,900 ರೂ. ಮೌಲ್ಯದ ಆಭರಣ, 17 ಲಕ್ಷ ರೂ. ಮೌಲ್ಯದ ವಾಹನ, 17,70,000 ರೂ. ಬೆಲೆ ಬಾಳುವ ಚಿನ್ನಾಭರಣಗಳು ಸೇರಿ ಒಟ್ಟು 2.21 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
- ಹಿರೇಕೆರೂರು ಗ್ರಾಮೀಣ ಕುಡಿಯುವ ನೀರು ಮತ್ತು ಒಳ ಚರಂಡಿ ಇಲಾಖೆಯ, ಸಹಾಯಕ ಎಂಜಿನಿಯರ್ ಕಾಶಿನಾಥ್ ಬುದ್ದಪ್ಪ ಭಜಂತ್ರಿ ಬಳಿ 6 ನಿವೇಶನ, 2 ವಾಸದ ಮನೆ, 5 ಎಕರೆ ಕೃಷಿ ಜಮೀನು, 20 ಲಕ್ಷ ರೂ. ನಗದು ಸೇರಿ ಒಟ್ಟು 3.2 ಕೋಟಿ ರೂ. ಮೌಲ್ಯದ ಆಸ್ತಿ ದೊರಕಿದೆ.
- ದಾವಣಗೆರೆ ಕರೂರಿನ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಕಮಲ್ ರಾಜ್ ಬಳಿ 6 ನಿವೇಶನಗಳು, 2 ವಾಸದ ಮನೆ, 1 ಎಕರೆ ಕೃಷಿ ಜಮೀನು, ಆಭರಣ, ವಾಹನಗಳು ಸೇರಿ ಒಟ್ಟು 1.99 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
- ಮೈಸೂರು ಮಹಾನಗರ ಪಾಲಿಕೆ ಪಿಆರ್‌ಒ ಡಿ.ನಾಗೇಶ್ ಬಳಿ 2 ನಿವೇಶನಗಳು, 1 ವಾಸದ ಮನೆ, 29 ಲಕ್ಷ ರೂ. ಮೌಲ್ಯದ ಆಭರಣ ಸೇರಿ ಒಟ್ಟು 2.72 ಕೋಟಿ ರೂ. ಮೌಲ್ಯದ ಆಸ್ತಿ ದೊರಕಿದೆ.
- ರಾಮನಗರ ಕೆಎಸ್‌ಆರ್‌ಟಿಸಿಯ ನಿವೃತ್ತ ಡಿಎಂಇ ವಿ. ಪ್ರಕಾಶ್ ಬಳಿ 8 ನಿವೇಶನ, 6 ವಾಸದ ಮನೆ, 6 ಎಕರೆ ಕೃಷಿ ಜಮೀನು, ಐಷಾರಾಮಿ ಕಾರುಗಳು, ಚಿನ್ನಾಭರಣ ಸೇರಿ ಒಟ್ಟು 4.26 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
- ಧಾರವಾಡ ಲಕ್ಕಮನಹಳ್ಳಿ ಕೆಐಎಡಿಬಿ ಸಹಾಯಕ ಕಾರ್ಯದರ್ಶಿ ಗೋವಿಂದಪ್ಪ ಹನುಮಂತಪ್ಪ ಭಜಂತ್ರಿ ಬಳಿ 3 ನಿವೇಶನಗಳು, 1 ವಾಸದ ಮನೆ, 7.26 ಎಕರೆ ಕೃಷಿ ಜಮೀನು, 41,11,000 ರೂ. ನಗದು, 27 ಲಕ್ಷ ರೂ. ಮೌಲ್ಯದ ಆಭರಣ ಸೇರಿದಂತೆ ಒಟ್ಟು 2.79 ಕೋಟಿ ರೂ. ಮೌಲ್ಯದ ಆಸ್ತಿ ಸಿಕ್ಕಿದೆ.
ದಾಳಿ ವೇಳೆ ಒಟ್ಟು 17.84 ಕೋಟಿ ರೂ. ಮೌಲ್ಯದ ಜಮೀನು ದಾಖಲೆಗಳು, 66.70 ಲಕ್ಷ ರೂ. ನಗದು, 1.66 ಕೋಟಿ ರೂ. ಮೌಲ್ಯದ ಚಿನ್ನಾಭರಣ, 1.44 ಕೋಟಿ ರೂ. ಮೌಲ್ಯದ ವಾಹನಗಳು ಹಾಗೂ 88.26 ಲಕ್ಷ ರೂ. ಮೌಲ್ಯದ ಇತರೆ ವಸ್ತುಗಳು ಸೇರಿ ಒಟ್ಟು 22.50 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಇದನ್ನೂ ಓದಿ: ಹಾವೇರಿಯಲ್ಲಿ ಲೋಕಾಯುಕ್ತ ದಾಳಿ: ಹಣ ಗಂಟು ಕಟ್ಟಿ ಹೊರಗೆಸೆದ ಎಇ