ICC Champions Trophy 2025: ಮುಂದಿನ ವರ್ಷ ನಡೆಯಲಿರುವ ICC ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿತ್ತು. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಆರಂಭಿಸಿತ್ತು. ಆದರೆ, ಪಾಕಿಸ್ತಾನದಲ್ಲಿ ನಡೆಯುವ ಐಸಿಸಿಯ ಯಾವುದೇ ಪಂದ್ಯಗಳಲ್ಲೂ ಟೀಂ ಇಂಡಿಯಾ ಭಾಗಿಯಾಗಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ. ಈ ಬೆನ್ನಲ್ಲೇ ಐಸಿಸಿ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಲು ಮುಂದಾಗಿದೆ. ಇದಕ್ಕಾಗಿ ಪಿಸಿಬಿಗೆ ಪತ್ರ ಬರೆದಿದೆ.
ಒಂದು ವೇಳೆ ಪಿಸಿಬಿ ಹೈಬ್ರಿಡ್ ಮಾದರಿಯನ್ನು ತಿರಸ್ಕರಿಸಿದರೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ದಕ್ಷಿಣ ಆಫ್ರಿಕಾಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಟೀಂ ಇಂಡಿಯಾ ಪಾಕ್ಗೆ ಪ್ರಯಾಣಿಸಲು ನಿರಾಕರಿಸಿರುವ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಿಸಿಬಿಗೆ ಇಮೇಲ್ ಕಳುಹಿಸಿದ್ದು, ಅಭಿಪ್ರಾಯ ತಿಳಿಸುವಂತೆ ಹೇಳಿದೆ. ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡರೆ ಆತಿಥ್ಯದ ಸಂಪೂರ್ಣ ಶುಲ್ಕ ನೀಡುವುದಾಗಿಯೂ ತಿಳಿಸಿದೆ.
ಐಸಿಸಿ ಪಿಸಿಬಿಗೆ ಬರೆದ ಪತ್ರದಲ್ಲಿ ಮುಂದಿನ ವರ್ಷ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿರುವ ಟೂರ್ನಿಯಲ್ಲಿ ಭಾರತದ ಪಂದ್ಯಗಳನ್ನು ಯುಎಇ ಮತ್ತು ಫೈನಲ್ ಅನ್ನು ದುಬೈನಲ್ಲಿ ನಡೆಸುವುದು ಪ್ರಸ್ತುತ ಯೋಜನೆಯಾಗಿದೆ ಎಂದು ಉಲ್ಲೇಖಿಸಿದೆ.
ಟೂರ್ನಿಯಿಂದ ಹಿಂದೆ ಸರಿಯುತ್ತಾ ಪಾಕ್?: ಪಾಕಿಸ್ತಾನದ 'ಡಾನ್' ಸುದ್ದಿಸಂಸ್ಥೆ ಪ್ರಕಟಿಸಿದ ವರದಿಯ ಪ್ರಕಾರ, ಪಾಕಿಸ್ತಾನ ಸರ್ಕಾರ ಈ ಟೂರ್ನಿಯಿಂದ ತಂಡವನ್ನು ಹಿಂತೆಗೆದುಕೊಳ್ಳುವಂತೆ ಪಿಸಿಬಿಗೆ ತಿಳಿಸುವ ಸಾಧ್ಯತೆ ಇದೆ.
2012ರ ನಂತರ ದ್ವಿಪಕ್ಷೀಯ ಸರಣಿ ನಡೆದಿಲ್ಲ: ಭಾರತ-ಪಾಕಿಸ್ತಾನ ತಂಡಗಳು 2012ರಿಂದ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಿಲ್ಲ. ಕಳೆದ ವರ್ಷ ಪಾಕಿಸ್ತಾನ ಆಯೋಜಿಸಿದ್ದ ಏಷ್ಯಾಕಪ್ ಕೂಡ ಹೈಬ್ರಿಡ್ ಮಾದರಿಯಲ್ಲೇ ನಡೆದಿತ್ತು. ಆದರೆ ಭಾರತದಲ್ಲಿ ನಡೆದ ODI ವಿಶ್ವಕಪ್ ಸೇರಿದಂತೆ ICC ಟೂರ್ನಮೆಂಟ್‌ಗಳಲ್ಲಿ ಪಾಕ್ ಭಾಗಿಯಾಗಿತ್ತು.
ಇದನ್ನೂ ಓದಿ: ಅಫ್ಘಾನಿಸ್ತಾನ ಯುವ ಬ್ಯಾಟರ್ ಅಬ್ಬರಕ್ಕೆ ಸಚಿನ್, ಕೊಹ್ಲಿ, ಬಾಬರ್ ದಾಖಲೆ ಪುಡಿ