ನವದೆಹಲಿ: ದೇಶದ 10 ರಾಜ್ಯಗಳ 31 ಕ್ಷೇತ್ರಗಳಿಗೆ ಇಂದು ಉಪಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಉಪಚುನಾವಣೆ ಮೂಲಕ ಇದೇ ಮೊದಲ ಬಾರಿ ಚುನಾವಣ ಕಣಕ್ಕಿಳಿದಿದ್ದಾರೆ.
ರಾಜಸ್ಥಾನದಲ್ಲಿ ಏಳು, ಪಶ್ಚಿಮ ಬಂಗಾಳದಲ್ಲಿ ಆರು, ಅಸ್ಸಾಂನಲ್ಲಿ ಐದು, ಬಿಹಾರದಲ್ಲಿ ನಾಲ್ಕು, ಕರ್ನಾಟಕದಲ್ಲಿ ಮೂರು, ಮಧ್ಯ ಪ್ರದೇಶದಲ್ಲಿ ಎರಡು, ಕೇರಳದ ಎರಡು ಮತ್ತು ಛತ್ತೀಸ್ಗಢ, ಗುಜರಾತ್ ಮತ್ತು ಮೇಘಾಲಯದಲ್ಲಿ ತಲಾ ಒಂದು ಸ್ಥಾನಕ್ಕೆ ಮತದಾನ ನಡೆಯುತ್ತಿದೆ. ನವೆಂಬರ್ 23ರಂದು ಫಲಿತಾಂಶ ಹೊರಬೀಳಲಿದೆ.
ಸಿಕ್ಕಿಂನಲ್ಲಿ ಸೋರೆಂಗ್-ಚಕುಂಗ್ ಮತ್ತು ನಾಮ್ಚಿ ಸಿಂಘಿತಂಗ್ ಎರಡು ಕ್ಷೇತ್ರಗಳಿಗೆ ಮತದಾನ ಸಾಗುತ್ತಿದೆ. ತಮ್ಮ ಪ್ರತಿಸ್ಪರ್ಧಿಗಳು ಚುನಾವಣಾ ಕಣದಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಎಂ) ಅಭ್ಯರ್ಥಿಗಳಾದ ಆದಿತ್ಯ ಗೋಲೆ ಮತ್ತು ಸತೀಶ್ ಚಂದ್ರ ರೈ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೇರಳದ ವಯನಾಡ್‌ನಲ್ಲಿ ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ಇಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಎಲ್ಡಿಎಫ್ ಅಭ್ಯರ್ಥಿ ಸತ್ಯನ್ ಮೊಕೆರಿ, ಬಿಜೆಪಿಯ ನವ್ಯ ಹರಿದಾಸ್ ಸೇರಿದಂತೆ ಇತರರ ವಿರುದ್ಧ ಕಣಕ್ಕಿಳಿದಿದ್ದಾರೆ. ಕೇರಳದ ಮತ್ತೊಂದು ಕ್ಷೇತ್ರ ತ್ರಿಶ್ಯೂರ್ ಜಿಲ್ಲೆಯ ಚೆಲಕ್ಕರಾದಲ್ಲೂ ಉಪಚುನಾವಣೆ ಸಾಗಿದೆ.
ರಾಜಸ್ಥಾನದಲ್ಲಿ ಜುಂಜುನು, ದೌಸಾ, ದಿಯೋಲಿ-ಉನಿಯಾರಾ, ಖಿನ್ವಸರ್, ಚೌರಾಸಿ, ಸಲುಂಬರ್ ಮತ್ತು ರಾಮಗಢ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಪಶ್ಚಿಮ ಬಂಗಾಳದ ತಲ್ದಂಗ್ರಾ, ಸಿತೈ (ಎಸ್ಸಿ), ನೈಹತಿ, ಹರೋವಾ, ಮೇದಿನಿಪುರ್ ಮತ್ತು ಮದರಿಹತ್ ಕ್ಷೇತ್ರಗಳಿಗೆ ಮತದಾನ ಸಾಗಿದೆ.
ಅಸ್ಸಾಂನಲ್ಲಿ ಐದು ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದೆ. ಧೋಲೈ, ಬೆಹಾಲಿ, ಸಮಗುರಿ, ಬೊಂಗೈಗಾಂವ್ ಮತ್ತು ಸಿದ್ಲಿ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಬಿಹಾರದಲ್ಲಿ ರಾಮಗಢ, ತರಾರಿ, ಇಮಾಮ್‌ಗಂಜ್ ಮತ್ತು ಬೆಳಗಂಜ್ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಉಪ ಚುನಾವಣೆಗೆ ಮತದಾನ ಸಾಗಿದೆ. ಮಧ್ಯಪ್ರದೇಶದಲ್ಲಿ ಬುಧ್ನಿ ಮತ್ತು ವಿಜಯಪುರ ವಿಧಾನಸಭಾ ಕ್ಷೇತ್ರ ಕೂಡ ಉಪ ಚುನಾವಣೆಗೆ ಮತದಾನ ಪ್ರಗತಿಯಲ್ಲಿದೆ.(ಐಎಎನ್ಎಸ್)
ಇದನ್ನೂ ಓದಿ: ಜಾರ್ಖಂಡ್ ಚುನಾವಣೆ- ಮೊದಲ ಹಂತದ ಮತದಾನ: ಉತ್ಸಾಹದಿಂದ ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಮನವಿ