ಬೆಂಗಳೂರು: ಮಾರ್ಚ್ 2024ರ ದ್ವಿತೀಯ ಪಿಯುಸಿ ಪರೀಕ್ಷೆ-1ರ ಪ್ರಶ್ನೆ ಪತ್ರಿಕೆಗಳ ಮಾದರಿ ಉತ್ತರಗಳನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಜೊತೆಗೆ ಪೂರಕ ದಾಖಲೆಗಳೊಂದಿಗೆ ವಿದ್ಯಾರ್ಥಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ದಿನಾಂಕ 1/3/2024 ರಿಂದ 18/3/2024 ರವರೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ-1ರ ವಿಷಯವಾರು ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರ (Scheme of Evaluation) ಗಳನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ದಿನಾಂಕ 20/3/2024 ರಿಂದ ದಿನಾಂಕ 22/3/2024 ರವರೆಗೆ ನಡೆಯಲಿರುವ ಪ್ರಶ್ನೆಪತ್ರಿಕೆಗಳ ಮಾದರಿ ಉತ್ತರಗಳನ್ನು ನಂತರ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಮತ್ತು ಪೋಷಕರುಗಳು ಈ ಕೆಳಗಿನ ಅಂಶಗಳಿಗೆ ಮಾತ್ರ ಆಕ್ಷೇಪಣೆಗಳನ್ನು ಪೂರಕ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ ಎಂದು ಮಂಡಳಿ ತಿಳಿಸಿದೆ.
ದ್ವಂದ್ವಾರ್ಥ ಬರುವ ಪ್ರಶ್ನೆಗಳಿಗೆ, ಅಪೂರ್ಣ ಪ್ರಶ್ನೆಗಳಿಗೆ, ಪಠ್ಯಕ್ರಮದಲ್ಲಿ ಇಲ್ಲದೇ ಇರುವುದು ಹಾಗೂ ಕನ್ನಡ ಮತ್ತು ಇಂಗ್ಲೀಷ್ ಆವೃತ್ತಿಯಲ್ಲಿ ಬೇರೆ ಬೇರೆ ಅರ್ಥ ಬರುವಂತದ್ದು, ಒಂದು ಆಯ್ಕೆಗಿಂತ ಹೆಚ್ಚು ಆಯ್ಕೆಗಳು ಸರಿ ಇರುವ ಬಹು ಆಯ್ಕೆ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.
ಆನ್‌ಲೈನ್ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 19/3/2024 ರಿಂದ 21/3/2024 ರ ಸಂಜೆ 5.00 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ. 21/3/2024 ರ ಸಂಜೆ 5.00 ಗಂಟೆಯ ನಂತರ ಸಲ್ಲಿಸಲಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದ್ದು, https://kseab.karnataka.gov.in/ ಲಿಂಕ್ ಬಳಸಿ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸೂಚಿಸಿದೆ.
ಇದನ್ನೂ ಓದಿ: 5,8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್