ಬೆಂಗಳೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಕುಟುಂಬ 23.72 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದೆ. ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ಕುಟುಂಬ 7.5 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿದೆ. ಇಬ್ಬರ ಕುಟುಂಬದಲ್ಲೂ ಅಭ್ಯರ್ಥಿಗಿಂತ ಪತ್ನಿಯೇ ಸಿರಿವಂತೆ ಎಂಬುದು ವಿಶೇಷ.
ಡಾ.ವೈ.ಎ.ನಾರಾಯಣಸ್ವಾಮಿ ಅವರು ತಮ್ಮ ಕೈಯಲ್ಲಿ 2.50 ಲಕ್ಷ ರೂ. ನಗದು ಹೊಂದಿದ್ದಾರೆ. ತಲಾ ಒಂದು ಬಿಎಂಡಬ್ಲ್ಯು, ಹ್ಯುಂಡೈ ಆಕ್ಸೆಂಟ್, ಮಾರುತಿ-800 ಕಾರು, ರಾಯಡೋ ಆ್ಯಂಡ್ ರೋಲೆಕ್ಸ್ ವಾಚ್, ಠೇವಣಿಗಳು ಸೇರಿ 11,52,00,000 ರೂ. ಮೌಲ್ಯದ ಚರ ಮತ್ತು ಸ್ತಿರಾಸ್ತಿ ಹೊಂದಿದ್ದಾರೆ.
ಇವರ ಪತ್ನಿ ಬಿ.ಎನ್.ಉಷಾನಂದಿನಿ ಹೆಸರಿನಲ್ಲಿ ಎರಡು ಕೆ.ಜಿ ಚಿನ್ನ, ಕಾರು ಸೇರಿ 12,20,00,000 ರೂ. ಮೌಲ್ಯದ ಚರ ಮತ್ತು ಸ್ತಿರಾಸ್ಥಿ ಇದೆ. ಪುತ್ರ ವೈ.ಎನ್.ಪ್ರಜ್ಞ ನಾರಾಯಣ ಹೆಸರಿನಲ್ಲಿ ಚಿನ್ನ, ಠೇವಣಿ ಸೇರಿ 13.33 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.
ಕೃಷಿ, ಕೃಷಿಯೇತರ ಜಮೀನು, ಮನೆ, ವಾಣಿಜ್ಯ ಕಟ್ಟಡಗಳು ಸೇರಿದಂತೆ ನಾರಾಯಣಸ್ವಾಮಿ ಮತ್ತವರ ಪತ್ನಿ ಒಟ್ಟು 23.72 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ನಾರಾಯಣಸ್ವಾಮಿ 6.46 ಕೋಟಿ ಮತ್ತು ಪತ್ನಿ 6.66 ಕೋಟಿ ಬ್ಯಾಂಕ್ ಸಾಲ ಪಡೆದಿದ್ದಾರೆ. ಇಬ್ಬರದು ಸೇರಿ 13.13 ಕೋಟಿ ರೂ. ಸಾಲವಿದೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಅ.ದೇವೇಗೌಡ ಕುಟುಂಬದ ಆಸ್ತಿ ವಿವರ: ಅ.ದೇವೇಗೌಡ ಚರ ಮತ್ತು ಸ್ಥಿರ ಸೇರಿ ಒಟ್ಟು ಸುಮಾರು 1.26 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, ಪತ್ನಿ 6.36 ಕೋಟಿ ಆಸ್ತಿ ಹೊಂದಿದ್ದಾರೆ. ದೇವೇಗೌಡರಿಗಿಂತ ಪತ್ನಿ ಕೆ.ಚೂಡಾಮಣಿ ಅವರೇ ಶ್ರೀಮಂತೆ.
ಅ.ದೇವೇಗೌಡರಿಗೆ ಇನ್ನೋವಾ ಕಾರು, ಚಿನ್ನ ಸೇರಿ 56.20 ಲಕ್ಷ ರೂ. ಮೌಲ್ಯದ ಚರಾಸ್ತಿಯಿದೆ. ಕೃಷಿ ಜಮೀನು, ಕೃಷಿಯೇತರ ನಿವೇಶನ, ನಿವಾಸ ಸೇರಿದಂತೆ 70 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ಒಟ್ಟು 1.26 ಕೋಟಿ ಆಸ್ತಿ ಹೊಂದಿದ್ದು ಸರ್ಕಾರಕ್ಕೆ 1.46 ಲಕ್ಷ ರೂ. ತೆರಿಗೆ ಬಾಕಿ ಇರಿಸಿಕೊಂಡಿರುವ ಮಾಹಿತಿ ನೀಡಿದ್ದಾರೆ.
ಕೆ.ಚೂಡಾಮಣಿ ಹೆಸರಿನಲ್ಲಿ ಚಿನ್ನ, ಬೆಳ್ಳಿ ಸೇರಿ 36.42 ಲಕ್ಷ ರೂ. ಮೌಲ್ಯದ ಚರಾಸ್ತಿ, ಮನೆಗಳು, ವಾಣಿಜ್ಯ ಕಟ್ಟಡ ಸೇರಿ 5.74 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಒಟ್ಟು 6.36 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದು, 4.50 ಲಕ್ಷ ರೂ. ಬ್ಯಾಂಕ್ ಸಾಲ ಹೊಂದಿರುವ ಮಾಹಿತಿ ಒದಗಿಸಿದ್ದಾರೆ.
ಇದರ ಜೊತೆಗೆ, ಬೆಂಗಳೂರಿನ ಚಾಮರಾಜಪೇಟೆಯ ಕೇಂದ್ರೀಯ ಪೊಲೀಸ್ ಠಾಣೆಯಲ್ಲಿ ಮೆಡಿಕಲ್ ಸೀಟು ವಂಚನೆ ಪ್ರಕರಣ ದಾಖಲಾಗಿರುವ ಮಾಹಿತಿಯನ್ನು ಅಫಿಡವಿಟ್‌ನಲ್ಲಿ ಅ.ದೇವೇಗೌಡ ನೀಡಿದ್ದಾರೆ.