ಬೆಂಗಳೂರು: ರಾಜ್ಯ ಸರ್ಕಾರದ ಜಾತ್ಯತೀತ ವ್ಯವಸ್ಥೆ ಮತ್ತು ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸಿದ್ದ ಆರೋಪ ಎದುರಿಸುತ್ತಿದ್ದ ಮುಂಬೈನ ಥಾಣೆಯ ಪ್ರಾಧ್ಯಾಪಕ ವಿನಿತ್ ನಾರಾಯಣ ನಾಯಕ್ ಅವರ ವಿರುದ್ಧ ಮುಂದಿನ ವಿಚಾರಣೆಯವರೆಗೂ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶಿಸಿದೆ.
ವಿನಿತ್ ನಾರಾಯಣ ನಾಯಕ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಸೈಬರ್ ಅಪರಾಧ ಪ್ರಕರಣ ರದ್ದುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಈ ಆದೇಶ ನೀಡಿ, ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೆಟ್ ಜನರಲ್ ಶಶಿಕಿರಣ ಶೆಟ್ಟಿ, ರಾಜ್ಯದಲ್ಲಿ ಜಾತ್ಯತೀತ ವ್ಯವಸ್ಥೆಯನ್ನು ಬಲಿಷ್ಟಗೊಳಿಸಲು ಯಾವುದೇ ಧಕ್ಕೆಯಾಗದಂತೆ ಸರ್ಕಾರ ತನ್ನ ಜವಾಬ್ದಾರಿ ನಿಭಾಯಿಸುತ್ತಿದೆ. ಅರ್ಜಿದಾರರು ಸಮುದಾಯಗಳ ನಡುವೆ ದ್ವೇಷ ಬಿತ್ತುವ ರೀತಿಯಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, ಅರ್ಜಿದಾರರು ಯಾವುದೇ ಸ್ವಯಂ ಹೇಳಿಕೆಯನ್ನು ನೀಡಿಲ್ಲ. ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದ ಹೇಳಿಕೆಗೆ ಪ್ರತಿಯಾಗಿ ಟ್ವೀಟ್ ಮಾಡಿದ್ದಾರೆ ಅಷ್ಟೇ. ಇದೆಲ್ಲವೂ ಟಿ.ವಿ.ಚಾನೆಲ್ಗಳಲ್ಲಿ ಅದಾಗಲೇ ವಿಸ್ತೃತವಾಗಿ ಬಿತ್ತರಗೊಂಡಿದೆ ಎಂದು ತಿಳಿಸಿದರು.
ಮುಂದುವರೆದು, ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಆದ್ದರಿಂದ, ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ: ದೇಶದ ಸಂಪತ್ತನ್ನು ಒಂದು ಸಮುದಾಯಕ್ಕೆ ಹಂಚುತ್ತೇನೆ ಎಂಬ ರೀತಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಟಿ.ವಿ.ಚಾನೆಲ್ಗಳಲ್ಲಿ ಬಿತ್ತರಗೊಂಡಿತ್ತು. ಈ ಹೇಳಿಕೆಯನ್ನು ಗುರಿಯಾಗಿಸಿಕೊಂಡು ವಿನಿತ್ ನಾರಾಯಣ ನಾಯಕ್ ತಮ್ಮ 'ಭಿಕುಮಾತ್ರೆ (ಮೋದಿಯವರ ಕುಟುಂಬ) ಮುಂಬೈಚ ಡಾನ್' ಹೆಸರಿನ 'ಎಕ್ಸ್' ಖಾತೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುವ ಭಾವಚಿತ್ರವನ್ನು ಪೋಸ್ಟ್ ಮಾಡಿ ಪ್ರತಿಕ್ರಿಯಿಸಿದ್ದರು.
ಹಿಂದೂಗಳು ಎಂದರೆ ಪರಿಶಿಷ್ಟ ಜಾತಿ (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳನ್ನೂ (ಎಸ್ಟಿ) ಒಳಗೊಂಡಿರುತ್ತದೆ. ಹಿಂದೂಗಳ ಸಂಪತ್ತು ಕಸಿದುಕೊಂಡು ಮುಸ್ಲಿಮರಿಗೆ ಹಂಚುವುದಾಗಿ ಕಾಂಗ್ರೆಸ್ ನೀಡಿರುವ ಹೇಳಿಕೆಯ ಹಿಂದೆ ಎಸ್ಸಿ ಮತ್ತು ಎಸ್ಟಿಗಳ ಸಂಪತ್ತು ಕೂಡಾ ಒಳಗೊಂಡಿದೆ ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ, ಐಪಿಸಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಆರೋಪ: ಪಿಡಿಒ ಮತ್ತವರ ಪತ್ನಿ, ಅತ್ತೆ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಕಾರ