ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಮೂರು ವರ್ಷಗಳ 'ಪದವಿ' ಕಲಿಕೆ ಪದ್ಧತಿ ಮರು ಜಾರಿಗೆ ಬರಲಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಮೂರು ವರ್ಷದ ಡಿಗ್ರಿ ಕೋರ್ಸ್ ಕಲಿಕೆಯನ್ನು ಅಳವಡಿಸುವಂತೆ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್‌ಇಪಿ) ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ 4 ವರ್ಷಗಳ ಪದವಿ ಕೋರ್ಸ್ ಪದ್ಧತಿಯನ್ನು ರದ್ದುಪಡಿಸಲಾಗಿದೆ. ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಪ್ರಕಾರ 4 ವರ್ಷದ ಡಿಗ್ರಿ ಕೋರ್ಸ್ಗಳನ್ನು ವಾಪಸ್ ಪಡೆಯಲಾಗಿದ್ದು, ಇದರ ಬದಲಿಗೆ ಈ ಹಿಂದೆ ಇದ್ದಂತೆ 3 ವರ್ಷದ ಪದವಿ ಕೋರ್ಸ್ ಅನುಷ್ಠಾನಕ್ಕೆ ತರಲಾಗಿದೆ.
ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸಿನಂತೆ ನಾಲ್ಕು ವರ್ಷಗಳ ಪದವಿ ಕೋರ್ಸ್ ರದ್ದು ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 6 ಸೆಮಿಸ್ಟರ್‌ಗಳಿರುವ ಮೂರು ವರ್ಷದ ಪದವಿ ತರಗತಿಗಳನ್ನು ಜಾರಿಗೆ ತರಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.
ರಾಜ್ಯ ಶಿಕ್ಷಣ ನೀತಿ ಆಯೋಗ ಎಸ್ಇಪಿಯ ಮುಖ್ಯಸ್ಥ ಪ್ರೊ.ಸುಖದೇವ್ ಥೋರಟ್ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ಡೀನ್ಗಳು, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಣ ತಜ್ಞರು ಸೇರಿದಂತೆ ಹಲವರ ಜೊತೆ 3 ತಿಂಗಳುಗಳ ಕಾಲ ನಿರಂತರವಾಗಿ ಸಭೆ ನಡೆಸಿ, ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ 3 ವರ್ಷದ ಪದವಿ ಕೋರ್ಸ್ ಮರು ಜಾರಿಗೆ ತರುವಂತೆ ಶಿಫಾರಸು ಮಾಡಿದ್ದರು.
ಎಸ್ಇಪಿ ಶಿಫಾರಸಿನಂತೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2024-2025) ಮೂರು ವರ್ಷಗಳ ಪದವಿ ತರಗತಿಗೆ ಪ್ರವೇಶಾತಿ ನೀಡುವಂತೆ ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ.
ಈಗಾಗಲೇ ಪ್ರವೇಶಾತಿ ಪಡೆದವರಿಗೆ 4 ವರ್ಷ: ಈಗಾಗಲೇ ಎನ್‌ಇಪಿ ಪ್ರಕಾರ ನಾಲ್ಕು ವರ್ಷಗಳ ಪದವಿ ತರಗತಿಗೆ ಪ್ರವೇಶಾತಿ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು 4 ವರ್ಷದ ಕೋರ್ಸ್ ಪೂರ್ಣಗೊಳ್ಳುವವರೆಗೆ ಅಭ್ಯಾಸ ಮುಂದುವರಿಸಬಹುದಾಗಿದೆ. ಆದರೆ ಈ ಶೈಕ್ಷಣಿಕ ವರ್ಷದಿಂದ ಪ್ರವೇಶಾತಿ ಪಡೆಯುವವರಿಗೆ ಮೂರು ವರ್ಷದ ಕೋರ್ಸ್ ಅನ್ವಯವಾಗಲಿದೆ.
ಹಿಂದಿನ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿತ್ತು. ಆದರೆ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎನ್‌ಇಪಿ ರದ್ದುಗೊಳಿಸುವುದಾಗಿ ತಿಳಿಸಿ, ಹೊಸ ಶಿಕ್ಷಣ ನೀತಿ ರೂಪಿಸಲು ಸಮಿತಿ ರಚಿಸಿತ್ತು.
ಇದನ್ನೂ ಓದಿ: ಕಾನೂನು ಪದವಿ ಪಡೆದಿದ್ದ ಸರ್ಕಾರಿ ನೌಕರನಿಗೆ ಪ್ರಮಾಣ ಪತ್ರ ನೀಡಲು ಹೈಕೋರ್ಟ್ ಸೂಚನೆ