ಬೆಂಗಳೂರು: ಕರ್ನಾಟಕದಲ್ಲಿ ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಸಂವಹನದಲ್ಲಿ ಜಾಗೃತಿ ಮೂಡಿಸಲು ಕರ್ನಾಟಕ ಸರ್ಕಾರ ಕಾಲರ್ ಐಡಿ ಮತ್ತು ಸ್ಪ್ಯಾಮ್ ನಿರ್ಬಂಧಿಸುವ ಅಪ್ಲಿಕೇಶನ್ ಟ್ರೂಕಾಲರ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಹಯೋಗವು ನಾಗರಿಕರಿಗೆ ಡಿಜಿಟಲ್ ಸುರಕ್ಷತೆ ನೀಡಲು ಸಹಾಯ ಮಾಡಲಿದೆ.
ಈ ಸಹಯೋಗದ ಅಡಿಯಲ್ಲಿ, ರಾಜ್ಯದ ನಾಗರಿಕರಲ್ಲಿ ಸೈಬರ್ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಟ್ರೂಕಾಲರ್ ಉಪಕ್ರಮಗಳ ಸರಣಿ ನಡೆಸಲಿದೆ. ಸಮಗ್ರ ಅಭಿಯಾನವು ಪ್ರಾಯೋಗಿಕ ಸಲಹೆಗಳೊಂದಿಗೆ ಆನ್‌ಲೈನ್ ಸುರಕ್ಷತಾ ಜಾಗೃತಿ ಮೂಡಿಸಲಿದೆ, ಈ ಮೂಲಕ ನಾಗರಿಕರನ್ನು ಡಿಜಿಟಲ್ ವಂಚನೆಗೆ ಒಳಗಾಗದಂತೆ ತಡೆಯಲಿದೆ. ಇದು ಅವರ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಲು ಮತ್ತು ಡಿಜಿಟಲ್ ಸಂವಹನ ಸಾಧನಗಳನ್ನು ಜವಾಬ್ದಾರಿಯುತವಾಗಿ ಬಳಸಲು ಅವರಿಗೆ ಅನುವು ಮಾಡಿಕೊಡುತ್ತದೆ. ಡಿಜಿಟಲ್ ಸಂವಹನಗಳ ಬಳಕೆಗಳ ಬಗ್ಗೆ ಹಾಗೂ ವಂಚನೆಗೆ ಒಳಗಾಗದಂತೆ ತಡೆಯುವ ನಿಟ್ಟಿನಲ್ಲಿ ಟ್ರೂಕಾಲರ್ ಕನ್ನಡದಲ್ಲಿಯೂ ತರಬೇತಿ ನೀಡಲಿದೆ.
ಒಪ್ಪಂದಕ್ಕೆ ಸಹಿ ಹಾಕಿ ಬಳಿಕ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಐಟಿ-ಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆ, ''ಈ ಪಾಲುದಾರಿಕೆಯು ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿ ನಮ್ಮ ನಾಗರಿಕರ ಸುರಕ್ಷತೆಗೆ ಆದ್ಯತೆ ನೀಡುವ ಕರ್ನಾಟಕ ಸರ್ಕಾರದ ಬದ್ಧತೆಯನ್ನು ತೋರಿಸುತ್ತದೆ. ಡಿಜಿಟಲ್ ಸಂವಹನದಲ್ಲಿ ಸೈಬರ್ ಅಪರಾಧಗಳು ಮತ್ತು ವಂಚನೆಯು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ತ್ವರಿತ ಗತಿಯಲ್ಲಿ ಬೆಳೆಯುತ್ತಿದೆ. ಹೀಗಾಗಿ ಅಮಾಯಕ ನಾಗರಿಕರು ಈ ವಂಚನೆಗೆ ಒಳಗಾಗದಂತೆ ತಪ್ಪಿಸಲು ಈ ಒಪ್ಪಂದ ಅನಿವಾರ್ಯವಾಗಿದೆ'' ಎಂದರು.
''ಡಿಜಿಟಲ್ ಸಂವಹನದಲ್ಲಿ ಜಾಗೃತಿ ಹೆಚ್ಚಿಸಲು ಮತ್ತು ಸುರಕ್ಷತೆಯನ್ನು ಉತ್ತೇಜಿಸಲು ಸರ್ಕಾರವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಟೆಕ್ ಹಬ್ ಎಂದೇ ಗುರುತಿಸಲ್ಪಟ್ಟಿರುವ ಬೆಂಗಳೂರಿನ ಇಲ್ಲಿ ನಾಗರಿಕರ ಆನ್‌ಲೈನ್ ಸುರಕ್ಷತೆಯನ್ನು ಹೆಚ್ಚಿಸಲು ಸಹಕಾರಿ ವಿಧಾನವನ್ನು ಅಳವಡಿಸಿಕೊಳ್ಳಲು ಹೆಮ್ಮೆಪಡುತ್ತೇವೆ'' ಎಂದು ತಿಳಿಸಿದರು.
ಈ ಕುರಿತು ಮಾತನಾಡಿದ ಟ್ರೂಕಾಲರ್ ಇಂಡಿಯಾದ ಮುಖ್ಯ ಉತ್ಪನ್ನ ಅಧಿಕಾರಿ ಮತ್ತು ಎಂಡಿ ರಿಷಿತ್ ಜುಂಜುನ್‌ವಾಲಾ, "ಸಂವಹನದಲ್ಲಿ ಡಿಜಿಟಲ್ ಸುರಕ್ಷತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರದೊಂದಿಗೆ ಸಹಕರಿಸಲು ನಾವು ಸಂತಸಪಡುತ್ತೇವೆ. ಡಿಜಿಟಲ್ ಜಗತ್ತಿನಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ನಾಗರಿಕರಿಗೆ ಅವಕಾಶ ನೀಡುತ್ತೇವೆ. ಟ್ರೂಕಾಲರ್ನಲ್ಲಿ, ನಾವು ವಂಚನೆ ತಡೆಗಟ್ಟುವಿಕೆ ನಿಯಂತ್ರಣಕ್ಕೆ ಸತತ ಪ್ರಯತ್ನ ಮಾಡುತ್ತಿದ್ದೇವೆ. ಈ ಸಹಯೋಗವು ಕರ್ನಾಟಕದ ನಾಗರಿಕರಿಗೆ ವಂಚಕರಿಂದ ಒಂದು ಹೆಜ್ಜೆ ಮುಂದೆ ಇರಲು ನೆರವಾಗಲಿದೆ ಎಂಬ ವಿಶ್ವಾಸವಿದೆ'' ಎಂದು ಹೇಳಿದರು.
ಇದನ್ನೂ ಓದಿ: ಬರಲಿದೆ ಆ್ಯಪಲ್ ಸೆಲ್ಫ್ ಡ್ರೈವಿಂಗ್ ಕಾರು: ಬೆಲೆ 1 ಲಕ್ಷ ಡಾಲರ್ಗಿಂತ ಕಡಿಮೆ!