ಬೆಂಗಳೂರು: ಸಾರ್ವಜನಿಕರ ಹಿತದೃಷ್ಟಿ ಹಾಗೂ ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಹುಕ್ಕಾ ನಿಷೇಧಿಸಲಾಗಿದೆ ಎಂದು ರಾಜ್ಯ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ. ಹುಕ್ಕಾ ನಿಷೇಧ ಪ್ರಶ್ನಿಸಿ ಆರ್.ಭರತ್ ಮತ್ತಿತರರು ಸಲ್ಲಿಸಿರುವ ಅರ್ಜಿಗಳು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠಕ್ಕೆ ಸರ್ಕಾರ ತಿಳಿಸಿದೆ.
ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಸಂವಿಧಾನದ ಕಲಂ 47ರಡಿ ಅಧಿಕಾರ ಚಲಾಯಿಸಿ, ಸಾರ್ವಜನಿಕರ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಬಗೆಯ ಹುಕ್ಕಾ ಮಾರಾಟ, ಸೇವನೆ, ದಾಸ್ತಾನು, ಜಾಹೀರಾತು ಮತ್ತು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ ಎಂದರು.
ಅಲ್ಲದೆ, ಒಂದು ವೇಳೆ ಧೂಮಪಾನ ಪ್ರದೇಶ ಇದ್ದರೆ, ಅಲ್ಲಿ ಇತರೆ ಯಾವುದೇ ಸೇವೆ ನೀಡುವಂತಿಲ್ಲ. ಆದರೆ ಹುಕ್ಕಾ ಬಾರ್‌ಗಳಲ್ಲಿ ಹುಕ್ಕಾ ಜೊತೆಗೆ ಇತರೆ ಎಲ್ಲಾ ಸೇವೆಗಳನ್ನು ನೀಡಲಾಗುತ್ತಿತ್ತು. ಹುಕ್ಕಾ ಸೇವನೆಗೆ ಪ್ರತ್ಯೇಕ ಪ್ರದೇಶ ನಿಗದಿ ಮಾಡಿರಲಿಲ್ಲ. ಬಾರ್‌ಗಳಲ್ಲಿ ಎಲ್ಲೆಡೆ ಹುಕ್ಕಾ ಸೇವನೆಗೆ ಅವಕಾಶ ನೀಡಲಾಗಿತ್ತು. ಇದರಿಂದ ಹುಕ್ಕಾ ಸೇವನೆ ಮಾಡುವವರು ಮಾತ್ರವಲ್ಲದೆ, ಇತರ ಸಾರ್ವಜನಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು.
ಹುಕ್ಕಾ ನಿಷೇಧಿಸುವ ವಿಧೇಯಕಕ್ಕೆ ಎರಡೂ ಸದನಗಳು ಅನುಮೋದನೆ ನೀಡಿವೆ. ಸದ್ಯ ಆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಬೇಕಿದೆ ಎಂದ ಅಡ್ವೊಕೇಟ್ ಜನರಲ್, ವಿಧೇಯಕಕ್ಕೂ ಮುನ್ನವೇ ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರ ಅಧಿಸೂಚನೆ ಹೊರಡಿಸಿದ್ದು, ಅದು ಸಂವಿಧಾನದ ಕಲಂ 162 ರಡಿ ಊರ್ಜಿತವಾಗುತ್ತದೆ ಎಂದು ವಿವರಿಸಿದರು.
ಜೊತೆಗೆ ಸಾರ್ವಜನಿಕ ಆರೋಗ್ಯ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ, ಸರ್ಕಾರಗಳು ಈ ಹಿಂದೆ ಸಾರಾಯಿ, ಲಾಟರಿ ಹಾಗೂ ಗುಟ್ಕಾ ನಿಷೇಧಿಸಿದ್ದಂತೆ ಇದೀಗ ಹುಕ್ಕಾ ನಿಷೇಧಿಸಲಾಗಿದೆ. ಅಲ್ಲದೆ, ಕರ್ನಾಟಕ ಮಾತ್ರವಲ್ಲದೆ, ದೇಶದ ಇತರೆ ಐದು ರಾಜ್ಯಗಳು ಕೋಟ್ಪಾ ಕಾಯ್ದೆಗೆ ತಿದ್ದುಪಡಿ ಮಾಡಿ ಹುಕ್ಕಾ ನಿಷೇಧ ಜಾರಿಗೊಳಿಸಿವೆ ಎಂದು ಸರ್ಕಾರದ ಕ್ರಮವನ್ನು ಎಜಿ ಸಮರ್ಥಿಸಿಕೊಂಡರು.
ಅರ್ಜಿದಾರರ ಪರ ವಕೀಲರು, ಕೋಟ್ಪಾ ಕಾಯ್ದೆ ಅನ್ವಯ ಧೂಮಪಾನಕ್ಕೆ ಅವಕಾಶವಿದೆ, ಆದರೆ ಅದಕ್ಕೆ ಪ್ರತ್ಯೇಕ ಸ್ಥಳವನ್ನು ನಿಗದಿ ಮಾಡಬೇಕಿದೆ. ಕಾಯಿದೆಯಲ್ಲಿ ಧೂಮಪಾನಕ್ಕೆ ನಿಷೇಧವಿಲ್ಲ, ಕೆಲವು ನಿಯಂತ್ರಣಗಳಿವೆ. ಅಲ್ಲದೆ, ಹುಕ್ಕಾ ಸೇವನೆ ಪ್ರದೇಶದಲ್ಲಿ ಇತರೆ ಯಾವುದೇ ಆಹಾರ ಪದಾರ್ಥಗಳನ್ನು ಸೇವನೆ ಮಾಡಲು ಅವಕಾಶ ನೀಡುತ್ತಿಲ್ಲ. ಕೋಟ್ಪಾ ಕಾಯ್ದೆ ಅನ್ವಯವೇ ಹುಕ್ಕಾ ಪಾರ್ಲರ್‌ಗಳನ್ನು ನಡೆಸಲಾಗುತ್ತಿದೆ ಎಂದು ನ್ಯಾಯಾಲಯಕ್ಕೆ ವಿವರಿಸಿದ್ದರು.
ಇದನ್ನೂ ಓದಿ: 5,8,9 ಮತ್ತು 11 ತರಗತಿ ಬೋರ್ಡ್ ಪರೀಕ್ಷೆ ರದ್ದು ಪಡಿಸಿದ ಹೈಕೋರ್ಟ್; ಮೇಲ್ಮನವಿ ಸಲ್ಲಿಸಲು ಸರ್ಕಾರದಿಂದ ಸಿದ್ಧತೆ