ಬೆಂಗಳೂರು: ಅಧಿಕೃತ ದತ್ತಾಂಶದ ಆಧಾರದಲ್ಲಿ ಒಳಮೀಸಲಾತಿ ಜಾರಿಗೆ ಕಾಂಗ್ರೆಸ್ನ ಪರಿಶಿಷ್ಟ ಜಾತಿ ಸಮುದಾಯದ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. ಒಳಮೀಸಲಾತಿ ಸಂಬಂಧ ಗೃಹ ಸಚಿವ ಪರಮೇಶ್ವರ್ ನಿವಾಸದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿ ನಾಯಕರು ಸುದೀರ್ಘ ಸಭೆ ನಡೆಸಿದರು.
"ಒಳ ಮೀಸಲಾತಿ ಜಾರಿ ಸಂಬಂಧ ಪರಿಶಿಷ್ಟ ಜಾತಿಯ ಎಲ್ಲ ಉಪಜಾತಿಯ ನಾಯಕರು ಸಹಮತಕ್ಕೆ ಬಂದಿದ್ದು, ಅಧಿಕೃತ ಅಂಕಿಅಂಶದ ಆಧಾರದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ಸಹಮತ ವ್ಯಕ್ತಪಡಿಸಿದ್ದಾರೆ" ಎಂದು ಸಭೆಯ ನಂತರ ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
"ಪರಿಶಿಷ್ಟ ಜಾತಿಯಲ್ಲಿನ ಎಲ್ಲ ಉಪ ಜಾತಿಗಳ ನಾಯಕರ ಜೊತೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಒಳಮೀಸಲಾತಿ ಜಾರಿ ವಿಷಯದಲ್ಲಿ ಎಲ್ಲರೂ ಒಂದು ಸಹಮತಕ್ಕೆ ಬಂದಿದ್ದೇವೆ. ಆದರೆ ಅಧಿಕೃತ ದತ್ತಾಂಶದ ಆಧಾರದ ಮೇಲೆ ಒಳಮೀಸಲಾತಿ ಜಾರಿ ಮಾಡಬೇಕು ಎನ್ನುವುದು ಬಹುತೇಕರ ಅಭಿಪ್ರಾಯ. ಸದಾಶಿವ ಆಯೋಗದ ಸಮೀಕ್ಷಾ ವರದಿ ಅವೈಜ್ಞಾನಿಕವಾಗಿದೆ ಎಂಬುದು ಕೆಲವರ ಕೂಗು. ಜೊತೆಗೆ, ಹಿಂದಿನ ಸರ್ಕಾರ ಈ ವರದಿಯನ್ನು ತಿರಸ್ಕರಿಸಿದೆ. ಈಗ ಉಪ ಜಾತಿಗಳ ಅಧಿಕೃತ ಅಂಕಿಅಂಶ ಇಲ್ಲ" ಎಂದರು.
"ಸಭೆಯಲ್ಲಿ ಎಸ್ಸಿಪಿ ಟಿಎಸ್ಪಿ ಅನುದಾನ ಬಳಸಿ ಪರಿಶಿಷ್ಟ ಜಾತಿಗಳ ಉಪಜಾತಿಗಳ ಸಮೀಕ್ಷೆ ನಡೆಸುವ ಬಗ್ಗೆಯೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಗ್ಗೆ ಸಹಮತ ವ್ಯಕ್ತವಾಗಿಲ್ಲ. ಜಾತಿ ಗಣತಿ ವರದಿ ಅಂಕಿಅಂಶವನ್ನು ಪರಿಗಣಿಸುವ ಬಗ್ಗೆಯೂ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ ಜಾತಿಗಣತಿ ವರದಿಯಲ್ಲಿ ಪರಿಶಿಷ್ಟ ಜಾತಿಗಳ ಉಪಜಾತಿಗಳ ಅಂಕಿಅಂಶ ಇಲ್ಲ ಎಂಬ ಬಗ್ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು" ಎಂದು ತಿಳಿಸಿದರು.
ಸಭೆಯ ಬಳಿಕ ಮಾತನಾಡಿದ ಶಾಸಕ ನರೇಂದ್ರಸ್ವಾಮಿ, "ವಾಸ್ತವ ಅಂಕಿಅಂಶ ಅಂದ್ರೆ ಒಪ್ಪಿಕೊಳ್ತೇವೆ. ಉಪಜಾತಿ ಬಗ್ಗೆ ತಕ್ಷಣವೇ ವಿಚಾರ ಮಾಡಲು ಬರಲ್ಲ. ಇದು ಸಂವಿಧಾನಾತ್ಮಕ ವಿಚಾರ. ಹಾಗಾಗಿ ಎಲ್ಲವನ್ನೂ ನೋಡಿ ತೆಗೆದುಕೊಳ್ಳಬೇಕು. ಹರಿಯಾಣ, ತೆಲಂಗಾಣದಲ್ಲಿ ಏನು ಮಾಡಿದ್ದಾರೆ?. ನಾವು ಅದನ್ನು ಪರಿಗಣಿಸಬೇಕಾ?. ನಮಗೆ ಸ್ಪಷ್ಟತೆ ಇಲ್ಲದೆ ಮಾತನಾಡಲ್ಲ" ಎಂದು ಹೇಳಿದರು.
"ಚುನಾವಣೆ ಮುನ್ನವೇ ಮಾತು ಕೊಟ್ಟಿದ್ದೆವು. ಚಿತ್ರದುರ್ಗದಲ್ಲಿ ಪರಿಶಿಷ್ಟರ ಸಮಾವೇಶ ಆಗಿತ್ತು. ಸರ್ಕಾರ ಬಂದರೆ ಒಳಮೀಸಲಾತಿ ತರುತ್ತೇವೆಂದು ಹೇಳಿದ್ದೆವು. ಸುಪ್ರೀಂ ಕೋರ್ಟ್ ತೀರ್ಪು ಕೂಡ ಬಂದಿದೆ. ನಾವೆಲ್ಲರೂ ಒಟ್ಟಾಗಿ ಕುಳಿತು ಚರ್ಚಿಸಿದ್ದೇವೆ. ಒಳಮಿಸಲಾತಿಗೆ ನಾವೆಲ್ಲ ಬದ್ಧರಾಗಿದ್ದೇವೆ. ನಾವು ಗಣತಿ ಮಾಡಲು ಅವಕಾಶವಿದೆ. ಈಗ ಮತ್ತೊಮ್ಮೆ ಗಣತಿ ಮಾಡಿ ನಿರ್ಧರಿಸುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧರಿಸುತ್ತೇವೆ" ಎಂದು ತಿಳಿಸಿದರು.
ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಸಿ ಪಿ ಯೋಗೇಶ್ವರ್; ಸ್ವತಂತ್ರ ಸ್ಪರ್ಧೆಗೆ ಸೈನಿಕನ ಇಂಗಿತ