ಬೆಂಗಳೂರು: ಬಿಬಿಎಂಪಿ ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ನಗರಪಾಲಿಕೆ, ನಗರಸಭೆ ಮತ್ತು ಪುರಸಭೆಯ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆಗಳಲ್ಲಿ, ನಕ್ಷೆ ಮಂಜೂರಾತಿ ಇಲ್ಲದೇ ನಿರ್ಮಾಣ ಮಾಡಿದ ಕಟ್ಟಡಗಳಿಗೆ ಬಿ ಖಾತೆ ನೀಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಕಂದಾಯ ಭೂಮಿಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿರುವ ಮಾಲೀಕರು ಮೂಲ ಸೌಲಭ್ಯ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನಿರ್ವಹಣಾ ಶುಲ್ಕ ವಿಧಿಸಲು ತೀರ್ಮಾನಿಸಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯ ಸಂಪುಟ ಉಪಸಮಿತಿಯಲ್ಲಿ ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಉಪಸಮಿತಿ ಶಿಫಾರಸಿಗೆ ಸಮ್ಮತಿ ಸೂಚಿಸಿದೆ.
ಹೆಚ್ಚಿನ ಆದಾಯ ಸಂಗ್ರಹದ ನಿಟ್ಟಿನಲ್ಲಿ ನಗರ ಪ್ರದೇಶಗಳಲ್ಲಿನ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡಲು ಸರ್ಕಾರ ತೀರ್ಮಾನಿಸಿರುವುದರಿಂದ ಸುಮಾರು 2,000 ಕೋಟಿ ರೂ. ಆದಾಯ ಸಂಗ್ರಹವಾಗಲಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 54.91 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಈ ಪೈಕಿ ಸುಮಾರು 20.55 ಲಕ್ಷ ಅಧಿಕೃತ ಆಸ್ತಿಗಳಾಗಿದ್ದು, ತೆರಿಗೆ ಪಾವತಿಸುತ್ತಿದ್ದರೆ, ಅನಧಿಕೃತವಾದ 34.35ಲಕ್ಷಕ್ಕೂ ಅಧಿಕ ಆಸ್ತಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುತ್ತಿಲ್ಲ. ಆದರೆ, ಆ ಎಲ್ಲ ಸ್ವತ್ತಿಗೂ ನೀರು, ರಸ್ತೆ, ವಿದ್ಯುತ್, ಬೀದಿ ದೀಪ, ಕಸ ವಿಲೇವಾರಿ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲಾಗುತ್ತಿದೆ. ಸ್ಥಳೀಯ ಸಂಸ್ಥೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಆಸ್ತಿ ತೆರಿಗೆ ಸಂಗ್ರಹಣೆಯೇ ಮಾರ್ಗವಾಗಿದ್ದು, ಇಂತಹ ಅನಧಿಕೃತ ಕಟ್ಟಡಗಳಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ವಹಿಯಲ್ಲಿ ಖಾತೆ ನೀಡಿ ಆಸ್ತಿ ತೆರಿಗೆ ಸಂಗ್ರಹಿಸುವ ರೀತಿಯಲ್ಲೇ ದಂಡ ಸಹಿತ ಕಟ್ಟಡ ಕಂದಾಯ ಸಂಗ್ರಹಿಸಲು ತೀರ್ಮಾನಿಸಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮ ತನಿಖಾ ವರದಿ ತೀರ್ಮಾನ ಮುಂದೂಡಿಕೆ: ಪಿಎಸ್ಐ ನೇಮಕಾತಿ ಹಗರಣದ ತನಿಖಾ ವರದಿ ಸ್ವೀಕಾರ ಸಂಬಂಧ ತೀರ್ಮಾನವನ್ನು ಸಚಿವ ಸಂಪುಟ ಸಭೆ ಮುಂದೂಡಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಕ್ಕೆ ಬರಲಾಗದೇ ಮುಂದಕ್ಕೆ ಹಾಕಲಾಗಿದೆ.
ಬಿಜೆಪಿ ಆಡಳಿತದಲ್ಲಿನ ಪಿಎಸ್ಐ ನೇಮಕಾತಿ ಹಗರಣದ ತನಿಖಾ ವರದಿ ಸಂಪುಟ ಸಭೆಯಲ್ಲಿ ಸ್ವೀಕಾರವಾಗಿದ್ದರೆ, ಇದೇ ಸದನದಲ್ಲಿ ಮಂಡಿಸುವ ಸಾಧ್ಯತೆ ಇತ್ತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ತನಿಖಾ ಸಮಿತಿ ಪಿಎಸ್ಐ ನೇಮಕಾತಿ ಅಕ್ರಮದ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಿತ್ತು. 545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ಕಳೆದ ವರ್ಷದ ಅಕ್ಟೋಬರ್ 3 ರಂದು ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿನ 93 ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ಕೆಲವು ಅಭ್ಯರ್ಥಿಗಳು ಹುದ್ದೆಗಳನ್ನು ಅಕ್ರಮವಾಗಿ ಗಿಟ್ಟಿಸಿಕೊಳ್ಳಲು ಹಣ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪರೀಕ್ಷಾ ಹಗರಣದಲ್ಲಿ ಹಣದ ಹೊಳೆಯೇ ಹರಿದಿರುವುದು ದೃಢವಾಗಿತ್ತು.
ಸಂಪುಟದ ಇತರೆ ಪ್ರಮುಖ ತೀರ್ಮಾನ?
- ಕರ್ನಾಟಕ ವೃತ್ತಿ ಪರ ಸಿವಿಲ್ ಇಂಜಿನಿಯರಿಂಗ್ ವಿಧೇಯಕ 2024 ಅನುಮೋದನೆ
- ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಅನುಮೋದನೆ
- ಘಾಟಿ ಸುಬ್ರಮಣ್ಯ, ಶ್ರೀ ಕ್ಷೇತ್ರ ಹುಲಗಮ್ಮ ದೇವಿ ಅಭಿವೃದ್ಧಿ ಪ್ರಾಧಿಕಾರ 2024ಕ್ಕೆ ಸಚಿವ ಸಂಪುಟ ಅನುಮೋದನೆ
- ಬಿಬಿಎಂಪಿ (ತಿದ್ದುಪಡಿ) ವಿಧೇಯಕ 2024ಗೆ ಅನುಮೋದನೆ
- ಗೃಹ ಲಕ್ಷ್ಮೀ ಯೋಜನೆ ತೃತೀಯ ಲಿಂಗಿಗಳಿಗೆ ಅನ್ವಯ ವಾಗುವಂತೆ ಗುರುತಿನ ಕಾರ್ಡ್ ನೀಡಲು ಅನುಮೋದನೆ
- ಕರ್ನಾಟಕ ಅಧಿನಿಯಮಗಳು ಪ್ರಾದೇಶಿಕ ಕಾನೂನು ನಿರಸನಗೊಳಿಸುವ ವಿಧೇಯಕ 2024ಕ್ಕೆ ಸಚಿವ ಸಂಪುಟ ಅನುಮೋದನೆ
ಇದನ್ನೂ ಓದಿ: ಪ್ರೇಮಿಗಳ ದಿನದ ನಿಮಿತ್ತ ಕೋಟ್ಯಂತರ ರೂ. ಗುಲಾಬಿ ಹೂವು ರಫ್ತು: ಕಳೆದ ವರ್ಷಕ್ಕಿಂತ ಏರಿಕೆಯಾದ ರಫ್ತಿನ ಪ್ರಮಾಣ