ಬೆಂಗಳೂರು: ಗಣಿ ಗುತ್ತಿಗೆ ಅವಧಿ ಮುಗಿದ ಕೆಜಿಎಫ್ ಪ್ರದೇಶದಲ್ಲಿ ಕೇಂದ್ರ ಸರ್ಕಾರ ಮರು ಗಣಿಗಾರಿಕೆ ಚಟುವಟಿಕೆ ಕೈಗೊಳ್ಳಲು ರಾಜ್ಯ ಸಚಿವ ಸಂಪುಟ ಸಭೆ ಇಂದು ಅನುಮತಿ ನೀಡಿದೆ. ನಿಷ್ಕ್ರಿಯವಾಗಿದ್ದ 1,304 ಎಕರೆ ಪ್ರದೇಶದಲ್ಲಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸುವ ಕೇಂದ್ರದ ಪ್ರಸ್ತಾವನೆಗೆ ಸರ್ಕಾರ ಸಹಮತಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ನಿಷ್ಕ್ರಿಯಗೊಂಡಿರುವ ಗಣಿಗುತ್ತಿಗೆ ಪ್ರದೇಶದ 13 Tailing dumpsನ 1,304 ಎಕರೆಯಲ್ಲಿ ವಿಶೇಷ ಅಧಿಕಾರ ಚಲಾಯಿಸಿ ಗಣಿಗುತ್ತಿಗೆ ಚಟುವಟಿಕೆ ಮುಂದುವರೆಸಲು ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
2022-23ನೇ ಸಾಲಿನವರೆಗೆ 75.24 ಕೋಟಿ ರೂ ಹೊಣೆಗಾರಿಕೆ ಬಾಕಿ ಮೊತ್ತ ಹಾಗೂ 2023-24ನೇ ಸಾಲಿನ ಮೊತ್ತವನ್ನೂ ಸಹ ರಾಜ್ಯಕ್ಕೆ ಪಾವತಿಸುವಂತೆ ಕೆಜಿಎಫ್ನಲ್ಲಿರುವ ಭಾರತ್ ಚಿನ್ನದ ಗಣಿ ಸಂಸ್ಥೆಯವರಿಗೆ ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೋರಲಾಗಿದೆ ಎಂದು ಹೇಳಿದರು.
ಗಾಂಧೀಜಿ ಜೊತೆಗೆ ಅಂಬೇಡ್ಕರ್ ಭಾವಚಿತ್ರ: ನವೆಂಬರ್ 26ರ ಸಂವಿಧಾನ ದಿನಾಚರಣೆ ಮತ್ತು ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳೂ ಸೇರಿದಂತೆ ಸರ್ಕಾರದ ವತಿಯಿಂದ ನಡೆಯುವ ಸಮಾರಂಭಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಭಾವಚಿತ್ರದೊಂದಿಗೆ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನೂ ಸಹ ಕಡ್ಡಾಯವಾಗಿ ಇಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಉಪನ್ಯಾಸಕರ ಕೊರತೆ ಬಗ್ಗೆ ಚರ್ಚೆ: ಉಪನ್ಯಾಸಕರ ಕೊರತೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಹಲವು ಹಳೆ ವಿವಿಗಳಲ್ಲಿ ನಿವೃತ್ತರಾದ ಬಳಿಕ ಖಾಲಿ ಹುದ್ದೆಗಳನ್ನು ತುಂಬಿಲ್ಲ. ವೇತನ, ಪಿಂಚಣಿಗೆ ಸಮಸ್ಯೆಯಾಗಿದೆ. ಜ್ಞಾನದ ಕೊಡು-ಕೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಪುಟ ಉಪಸಮಿತಿ ರಚಿಸಿ, ಪರಿಹಾರ ಹುಡುಕಲು ನಿರ್ಣಯಿಸಲಾಗಿದೆ ಎಂದರು.
ನೀಟ್ ಅಕ್ರಮ: ಸಂಪುಟ ಸಭೆಯಲ್ಲಿ ನೀಟ್ ಅಕ್ರಮದ ಬಗ್ಗೆಯೂ ಕಳವಳ ವ್ಯಕ್ತವಾಯಿತು. ತಮಿಳುನಾಡಿನ ರೀತಿ ರಾಜ್ಯದಲ್ಲೂ ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಉನ್ನತ ಶಿಕ್ಷಣ ಸಚಿವರು ಸರ್ಕಾರದ ನಿಲುವನ್ನು ಮುಂದೆ ತಿಳಿಸುತ್ತಾರೆ ಎಂದು ಹೇಳಿದರು.
ಇತರೆ ತೀರ್ಮಾನಗಳು: ವಿಶ್ವವಿದ್ಯಾಲಯಗಳಲ್ಲಿ ರಾಜ್ಯದಲ್ಲಿ ಪ್ರಧಾನಮಂತ್ರಿ ಉಚ್ಛತರ್ ಶಿಕ್ಷಾ ಅಭಿಯಾನ ಯೋಜನೆಯನ್ನು ಆಯಾಯ ವಿಶ್ವವಿದ್ಯಾಲಯಗಳ ವಿಸ್ತೃತ ಯೋಜನಾ ವರದಿಯಲ್ಲಿ ಸೂಚಿಸಿರುವಂತೆ ಬೆಂಗಳೂರು ವಿಶ್ವವಿದ್ಯಾಲಯ (ಬೆಂಗಳೂರು), ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ (ಬೆಳಗಾವಿ), ಕರ್ನಾಟಕ ವಿಶ್ವವಿದ್ಯಾಲಯ (ಧಾರವಾಡ), ಮಂಗಳೂರು ವಿಶ್ವವಿದ್ಯಾಲಯ (ಮಂಗಳೂರು), ಕಲಬುರಗಿ ವಿಶ್ವವಿದ್ಯಾಲಯ (ಕಲಬುರಗಿ) ಹಾಗೂ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ (ಬೆಂಗಳೂರು)ಗಳಲ್ಲಿ ಕೇಂದ್ರದ ವಂತಿಕೆ ರೂ.167.86 ಕೋಟಿ ಮತ್ತು ರಾಜ್ಯದ ವಂತಿಕೆ ರೂ. 111.91 ಕೋಟಿ ಒಟ್ಟು ರೂ.279.77 ಕೋಟಿಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಒಪ್ಪಿಗೆ.
- ರಾಜ್ಯದ 46,829 ಸರ್ಕಾರಿ ಶಾಲೆಗಳು ಮತ್ತು 1,234 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಮತ್ತು ನೀರಿನ ಸೌಲಭ್ಯ ಯೋಜನೆಯನ್ನು 29.19 ಕೋಟಿ ರೂ. ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು (ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರೂ.25.85 ಕೋಟಿ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರೂ.3.34 ಕೋಟಿ) ಸಚಿವ ಸಂಪುಟ ನಿರ್ಧಾರ.
- ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಕುಸನೂರ ವಸತಿ ಯೋಜನೆಯಲ್ಲಿ ಕುಸನೂರ ಗ್ರಾಮದ ವಿವಿಧ ಸರ್ವೆ ನಂಬರ್ ಗಳಲ್ಲಿ ವಸತಿ ಅಭಿವೃದ್ಧಿ ಯೋಜನೆಗೆ 2016-17ನೇ ಸಾಲಿನ ದರಪಟ್ಟಿಯಂತೆ ಅನುಮೋದನೆಯಾಗಿರುವ ರೂ. 94.80 ಕೋಟಿಗಳ ಅಂದಾಜು ಮೊತ್ತವನ್ನು ಪ್ರಾಧಿಕಾರ 2021-22ನೇ ಸಾಲಿನ ಏಕರೂಪ ದರಪಟ್ಟಿ ಮತ್ತು ಶೇ.18% ರಷ್ಟು ಜಿಎಸ್‍ಟಿ ತೆರಿಗೆಯನ್ನು ಅಳವಡಿಸಿಕೊಂಡು ಸಲ್ಲಿಸಿರುವ ಪರಿಷ್ಕೃತ ಮೊತ್ತ ರೂ.122.40 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನಿರ್ಣಯ.
- ಕರ್ನಾಟಕ ರಾಜ್ಯ ಸ್ಥಳೀಯ ಸಂಸ್ಥೆಗಳಲ್ಲಿನ ನೀರಿನ ಬಳಕೆ ಶುಲ್ಕದ ಹಿಂದಿನ ಬಾಕಿ ಮೊತ್ತ ಬಡ್ಡಿ ಸಹಿತವಾಗಿ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರಸ್ತುತ ವಾರ್ಷಿಕ ಬೇಡಿಕೆ ಸಹಿತ ವಸೂಲಿ ಮಾಡುವುದು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬಹುದಿನಗಳಿಂದ ಬಾಕಿ ಇರುವ ಆಸ್ತಿ ತೆರಿಗೆ ಮತ್ತು ವಾರ್ಷಿಕ ಬೇಡಿಕೆಗಳಿಗನುಗುಣವಾಗಿ ಆಸ್ತಿಗಳಿಂದ ವಸೂಲಿ ಮಾಡಬೇಕಾದ ಆಸ್ತಿ ತೆರಿಗೆಯ ವಸೂಲಿಗಾಗಿ ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯಲು ತೀರ್ಮಾನ. ಸ್ವ-ಸಹಾಯ ಗುಂಪುಗಳಿಗೆ ವಸೂಲಾದ ಮೊತ್ತದಲ್ಲಿನ ಶೇ.5 ರಷ್ಟನ್ನು ಪ್ರೊತ್ಸಾಹ ಧನ ರೂಪದಲ್ಲಿ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. ಆಸ್ತಿ ತೆರಿಗೆ ಬಾಕಿ ಮೊತ್ತ 1,860 ಕೋಟಿ ರೂ. ಇದೆ.
- ಕರ್ನಾಟಕ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನವನ್ನು ಸಮಾವೇಶಗೊಳಿಸುವ ದಿನಾಂಕ, ಸ್ಥಳ ಮತ್ತು ವೇಳೆಯನ್ನು ನಿಗದಿಪಡಿಸಲು ಸಿಎಂಗೆ ಅಧಿಕಾರ ನೀಡಲು ನಿರ್ಧಾರ.
- ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ 33 ಘಟಕಗಳನ್ನು ವಿಶೇಷ ಪೊಲೀಸ್ ಠಾಣೆಗಳೆಂದು ಘೋಷಿಸಲು ತಾತ್ವಿಕ ಒಪ್ಪಿಗೆ. ಇದನ್ನು ನಿರ್ವಹಣೆ ಮಾಡಲು 450 ಹುದ್ದೆ ಮಂಜೂರಾತಿ. ಎಸ್ಸಿ ಎಸ್ಟಿ ಕಾಯ್ದೆಯ ಪ್ರಕರಣವನ್ನು ಈ ಠಾಣೆಗಳು ನಿರ್ವಹಿಸಲಿವೆ. ಸಾಮಾನ್ಯ ಠಾಣೆಗಳ ಮೇಲೆ ಒತ್ತಡ ಹೆಚ್ಚಿರುವುದರಿಂದ ಈ ಠಾಣೆಗಳಿಗೆ ಜವಾಬ್ದಾರಿ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಇದಕ್ಕೆ ಪ್ರೋತ್ಸಾಹ ನೀಡಲಿದ್ದು, ಭಾಗಶಃ ವೆಚ್ಚ ಭರಿಸಲಿದೆ.
- 5 ವರ್ಷದ ವಾರ್ಷಿಕ ನಿರ್ವಹಣಾ ಯೋಜನೆಯನ್ನು ಒಳಗೊಂಡಿರುವ ಬಾಹ್ಯ ನೆರವಿನೊಂದಿಗೆ ಪ್ರಗತಿ ಪಥ ಯೋಜನೆಯಡಿ 7,110 ಕಿ.ಮೀಗಳ ಗ್ರಾಮೀಣ ರಸ್ತೆಗಳ ಅಭಿವೃದ್ಧಿಯನ್ನು ರೂ. 5190 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಈ ಯೋಜನೆಯನ್ನು ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ಮುಖಾಂತರ ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಕಾಮಗಾರಿಗಳನ್ನು ಸೂಕ್ತ ಮೊತ್ತದ ಪ್ಯಾಕೇಜ್‍ಗಳನ್ನಾಗಿ ಒಟ್ಟಾಗಿಸಿ, ಕರ್ನಾಟಕ ಪಾರದರ್ಶನ ಅದಿನಿಯಮಗಳನ್ವಯ ಟೆಂಡರ್ಗಳನ್ನು ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಕರೆದು ಅನುಷ್ಠಾನಕ್ಕೆ ತರಲು, 2024-25ನೇ ಸಾಲಿನಲ್ಲಿ ಡಿ.ಪಿ.ಆರ್ ತಯಾರಿಕೆಗೆ ರೂ.28 ಕೋಟಿಗಳನ್ನು ನೀಡಲು ಆರ್ಥಿಕ ಇಲಾಖೆಯನ್ನು ಕೋರಲು ಸಚಿವ ಸಂಪುಟ ಅನುಮೋದನೆ.
- ವಸತಿ ಶಾಲೆಯ ಮಕ್ಕಳಿಗೆ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿ ಕಾರ್ಯಕ್ರಮವನ್ನು ರೋಟರಿ ಸಹಭಾಗಿತ್ವದಲ್ಲಿ ಆಯೋಜನೆ. 2.37 ಕೋಟಿ ರೂ. ಬಳಕೆಗೆ ಒಪ್ಪಿಗೆ.
- ಹಾಸನದ ಮೊಸಳೆಹಳ್ಳಿ ನೂತನ ಸರ್ಕಾರಿ ಇಂಜಿನಿಯರಿಂಗ್ ಸರ್ಕಾರಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಪರಿಷ್ಕೃತ 59.57 ಕೋಟಿ ರೂ.
ಇದನ್ನೂ ಓದಿ: ಇತಿಹಾಸದ ಪುಟ ಸೇರಿದ ಬಂಗಾರ ಬಗೆದುಕೊಟ್ಟ ಕೆಜಿಎಫ್!