ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಮಂಡಿಸಿದ್ದ ಬಜೆಟ್‌ನಲ್ಲಿ ಶೇ.11 ರಷ್ಟು ದೊಡ್ಡ ಪಾಲು ಶಿಕ್ಷಣ ಇಲಾಖೆಗೆ ಸಿಕ್ಕಿದ್ದು, 37,587 ಕೋಟಿ ರೂ.ಗಳ ಬಂಪರ್ ಅನುದಾನದ ಭರವಸೆ ಪಡೆದುಕೊಂಡಿತ್ತು. ಆದರೆ, ಗ್ಯಾರಂಟಿಗಳ ಕಾರಣದಿಂದಾಗಿ ಶಿಕ್ಷಣ ಇಲಾಖೆಯಲ್ಲಿನ ಯೋಜನೆಗಳ ಅನುಷ್ಠಾನಕ್ಕೆ ಹಿನ್ನಡೆಯಾಗಿದ್ದು, 2024-25ನೇ ಸಾಲಿನ ಬಜೆಟ್‌ನಲ್ಲಿ ಪೂರ್ಣ ಪ್ರಮಾಣದ ಅನುದಾನ ಲಭ್ಯವಾಗಬಹುದು ಎನ್ನುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಈ ಬಾರಿ ಉಚಿತ ಬೈಸಿಕಲ್ ಯೋಜನೆ ನಿರೀಕ್ಷೆ ಹೆಚ್ಚಾಗಿದೆ.
2023ರ ಮೇ ತಿಂಗಳಿನಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್ ಸರ್ಕಾರದ ಬಜೆಟ್ ಜುಲೈನಲ್ಲಿ ಮಂಡನೆಯಾಗಿತ್ತು. ಸಿಎಂ ಸಿದ್ದರಾಮಯ್ಯ 37,587 ಕೋಟಿ ರೂ.ಗಳ ಅನುದಾನವನ್ನು ಶಿಕ್ಷಣ ಇಲಾಖೆಗೆ ಘೋಷಣೆ ಮಾಡಿದ್ದರು. ಪಠ್ಯ ಪರಿಷ್ಕರಣೆ, 550 ಕೋಟಿ ವೆಚ್ಚದಲ್ಲಿ 8311 ಶಾಲಾ ಕಾಲೇಜು ಕೊಠಡಿ ನಿರ್ಮಾಣ, 200 ಕೋಟಿ ವೆಚ್ಚದಲ್ಲಿ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಶೌಚಾಲಯ ಕಟ್ಟಡ ನಿರ್ಮಾಣ, 100 ಕೋಟಿ ವೆಚ್ಚದಲ್ಲಿ ಶಾಲಾ ಕಟ್ಟಡ ದುರಸ್ತಿ ಕಾರ್ಯ, 9-10ನೇ ತರಗತಿ ಮಕ್ಕಳಿಗೂ ಬಾಳೆಹಣ್ಣು, ಮೊಟ್ಟೆ ವಿತರಣೆ, ಕಲಿಕೆ ಹಿಂದುಳಿದ ವಿದ್ಯಾರ್ಥಿಗಳ ಸಜ್ಜುಗೊಳಿಸಲು 80 ಕೋಟಿ ವೆಚ್ಚದ ಮರು ಸಿಂಚನ ಯೋಜನೆ, ಅರಣ್ಯ ಇಲಾಖೆ ಸಹಯೋಗದಲ್ಲಿ ಸಸ್ಯ ಶಾಮಲ ಯೋಜನೆ ಜಾರಿ ಸೇರಿದಂತೆ ಹಲವು ಭರವಸೆಗಳನ್ನು ನೀಡಿತ್ತು.
ಇದರಲ್ಲಿ ಪಠ್ಯ ಪರಿಷ್ಕರಣೆ ಕಾರ್ಯವನ್ನು ಈಗಾಗಲೇ ನಡೆಸಿದ್ದು, ಬಿಜೆಪಿ ಸರ್ಕಾರದ ವೇಳೆ ಸೇರಿಸಲಾಗಿದ್ದು, ಪರಿಷ್ಕರಿಸಿದ್ದ ಪಠ್ಯದಲ್ಲಿ ಪರಿಸ್ಕರಣೆ ಮಾಡಲಾಗಿದೆ. ಆದರೆ, ಶಾಲಾ ಕಾಲೇಜು ಕೊಠಡಿ ದುರಸ್ತಿ ಕಾರ್ಯ ಪೂರ್ಣ ಪ್ರಮಾಣದಲ್ಲಿ ನಡೆದಿಲ್ಲ. ಅನುದಾನದ ಬಿಡುಗಡೆ ವಿಳಂಬವಾದ ಹಿನ್ನೆಲೆಯಲ್ಲಿ ಕೊಠಡಿಗಳ ದುರಸ್ತಿ ಕಾರ್ಯ ಕುಂಟುತ್ತಾ ಸಾಗಿದೆ. ಶೌಚಾಲಯ ಕೊರತೆ ಇರುವ ಶಾಲೆಗಳಲ್ಲಿ ನರೇಗಾ ಸಂಯೋಜನೆಯಲ್ಲಿ ಶೌಚಾಲಯ ಕಟ್ಟಡ ನಿರ್ಮಾಣದ ಭರವಸೆಯೂ ಸಮಪರ್ಕವಾಗಿ ಈಡೇರಿಲ್ಲ. ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಣೆಯನ್ನು 9-10ನೇ ತರಗತಿಗೆ ವಿಸ್ತರಿಸುವ ಭರವಸೆಯನ್ನು ಮಾತ್ರ ಸರ್ಕಾರ ಈಡೇರಿಸಿದೆ. ಮರು ಸಿಂಚನ ಯೋಜನೆಗೂ ಗ್ರಹಣ ಹಿಡಿದಿದೆ. ಆದರೆ, ಸಸ್ಯ ಶಾಮಲ ಯೋಜನೆಗೆ ಚಾಲನೆ ಸಿಕ್ಕಿದ್ದರೂ ಫಲಿತಾಂಶಕ್ಕೆ ಕಾಯಬೇಕಾಗಿದೆ.
ಉನ್ನತ ಶಿಕ್ಷಣದ ಅಡಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಬಿಟ್ಟು ಪ್ರತ್ಯೇಕ ಶಿಕ್ಷಣ ನೀತಿ ಜಾರಿ, ವಿಶ್ವೇಶ್ವರಯ್ಯ ವಿವಿ ಉನ್ನತೀಕರಣಕ್ಕೆ 25 ಕೋಟಿ ರೂ. ಅನುದಾನ, ವಿವಿಧ ಶಿಷ್ಯ ವೇತನ ಕಾರ್ಯಕ್ರಮಗಳನ್ನೆಲ್ಲಾ ಒಟ್ಟಿಗೆ ಸೇರಿಸಿ ಏಕ ಶಿಷ್ಯವೇತನ ವ್ಯವಸ್ಥೆ ಜಾರಿ, ಉತ್ತಮ ಸಾಧನೆ ಮಾಡುವ ವಿವಿಗಳಿಗೆ 50 ಲಕ್ಷ ಪ್ರೋತ್ಸಾಹ ಧನ, ವ್ಯಾವಹಾರಿಕ ಆಂಗ್ಲ ಕಲಿಕಾ ಕಾರ್ಯಕ್ರಮ ಸೇರಿ ಹಲವು ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಆದರೆ, ಅವುಗಳ ಅನುಷ್ಠಾನಕ್ಕೆ ವೇಗ ದೊರೆತಿಲ್ಲ. ರಾಷ್ಟ್ರೀಯ ನೀತಿಯನ್ನು ರದ್ದುಪಡಿಸಿ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೊಳಿಸುವ ಭರವಸೆಯಂತೆ ಹೊಸ ಶಿಕ್ಷಣ ನೀತಿ ಸಂಬಂಧ ಸರ್ಕಾರ ಸಮಿತಿ ರಚಿಸಿದ್ದು ವರದಿ ಪಡೆದುಕೊಂಡು ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ಜಾರಿಗೆ ಚಾಲನೆ ನೀಡಲಾಗಿದೆ. ಇದನ್ನು ಬಿಟ್ಟರೆ ಇತರ ಯೋಜನೆಗಳ ಅನುದಾನ ಬಿಡುಗಡೆ ವಿಳಂಬವಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯೋಜನೆಗಳ ಸಮರ್ಪಕ ಜಾರಿಗೆ ಹಿನ್ನಡೆಯಾಗಿದೆ.
ಈ ಬಾರಿಯ ಬಜೆಟ್ ನಿರೀಕ್ಷೆಗಳು: ಕೊರೊನಾ ಲಾಕ್ಡೌನ್ ನಂತರ ರಾಜ್ಯದಲ್ಲಿ ಸ್ಥಗಿತಗೊಳಿಸಿರುವ ಶಾಲಾ ಮಕ್ಕಳ ಉಚಿತ ಬೈಸಿಕಲ್ ಯೋಜನೆಗೆ ಮರುಚಾಲನೆ ಸಿಗುವ ನಿರೀಕ್ಷೆ ಇದೆ. ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಸೈಕಲ್ ಯೋಜನೆಗೆ ಮತ್ತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕೆಂದು ಶಿಕ್ಷಣ ಇಲಾಖೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ ವಾರದಲ್ಲಿ ಎರಡು ದಿನ ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆಹಣ್ಣು, ಚಿಕ್ಕಿ ವಿತರಿಸಲಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳಲ್ಲಿನ ಪೌಷ್ಟಿಕಾಂಶ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಜಾರಿಗೆ ತಂದ ಯೋಜನೆಯನ್ನು 5 ದಿನಕ್ಕೆ ವಿಸ್ತರಣೆ ಮಾಡುವ ನಿರೀಕ್ಷೆ ಇದೆ. ಶಾಲಾ ಕಾಲೇಜು ಕೊಠಡಿಗಳ ದುರಸ್ತಿ ಕಾರ್ಯ ಹಾಗೂ ಹೊಸ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಹೆಚ್ಚುವರಿ ಅನುದಾನದ ನಿರೀಕ್ಷೆ, ಶಾಲಾ ಕಾಲೇಜುಗಳಲ್ಲಿ ಶೌಚಾಲಯ ಕೊರತೆ ನಿವಾರಿಸಲು ಹೆಚ್ಚುವರಿ ಶೌಚಾಲಯ ಕೊಠಡಿ ನಿರ್ಮಾಣ, ಶೌಚಾಲಯ ನಿರ್ವಹಣೆಗೆ ಹೆಚ್ಚುವರಿ ಅನುದಾನದ ನಿರೀಕ್ಷೆ, ದೈಹಿಕ ಶಿಕ್ಷಕರ ನೇಮಕ, ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕ, ಅತಿಥಿ ಉಪನ್ಯಾಸಕರ ಖಾಯಂ ವಿಚಾರದಲ್ಲಿ ಸಕಾರಾತ್ಮಕ ಭರವಸೆಯನ್ನು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಫೆ.16ರಂದು ಪ್ರಸಕ್ತ ಸಾಲಿನ ಬಜೆಟ್ ಮಂಡನೆ: ಸ್ಪೀಕರ್ ಯು.ಟಿ.ಖಾದರ್