ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸಕ್ತ ಸಾಲಿನ ಬಜೆಟ್ ಅನ್ನು ಫೆ.16ರಂದು ಬೆಳಗ್ಗೆ 10.15ಕ್ಕೆ ಮಂಡಿಸಲಿದ್ದಾರೆ ಎಂದು ಸ್ಪೀಕರ್ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಫೆ.15ರಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಸಿಎಂ ಉತ್ತರಿಸುವರು. ಬಜೆಟ್ ಚರ್ಚೆ ಫೆ.19ರಿಂದ ಆರಂಭವಾಗಲಿದೆ ಎಂದರು.
ವಿಧಾನಸೌಧದಲ್ಲಿ 5ಜಿ ಸೇವೆ ಶುರು: ವಿಧಾನಸೌಧದ ಆವರಣದಲ್ಲಿ ಇಂದಿನಿಂದ ಬಹುನಿರೀಕ್ಷಿತ 5ಜಿ ಸೇವೆ ಆರಂಭವಾಗಿದೆ. ನೆಟ್‍ವರ್ಕ್ ಸಮಸ್ಯೆ ಕುರಿತಂತೆ ಸಾಕಷ್ಟು ದೂರುಗಳು ಬರುತ್ತಿದ್ದವು. ಹಾಗಾಗಿ 5ಜಿ ತರಂಗಾಂತರ ಸೇವೆಯನ್ನು ಆರಂಭಿಸಲಾಗಿದ್ದು, ಇದರಿಂದ ನೆಟ್‍ವರ್ಕ್ ಕಿರಿಕಿರಿಗೆ ಕಡಿವಾಣ ಬೀಳಲಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ವಿಧಾನಸಭೆಯ ಪ್ರಶ್ನೋತ್ತರ ವೇಳೆ ಶ್ರೀನಿವಾಸಪುರ ಕ್ಷೇತ್ರದ ಶಾಸಕ ವೆಂಕಟಶಿವರೆಡ್ಡಿ, ತಮ್ಮ ಕ್ಷೇತ್ರಕ್ಕೆ ಮಂಜೂರಾದ ಕಾಮಗಾರಿಗಳಿಗೆ ತಡೆ ನೀಡಲಾಗಿದೆ ಎಂದು ಆಕ್ಷೇಪಿಸಿದರು. ಇದಕ್ಕೆ ಉತ್ತರಿಸಿದ ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು, "ಬಜೆಟ್ ಅನುದಾನ ಎರಡು ಸಾವಿರ ಕೋಟಿ ರೂಪಾಯಿಗಳಿದ್ದರೆ ಹಿಂದಿನ ಸರ್ಕಾರ 15 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿ ಹೊರೆ ಹೊರಿಸಿ ಹೋಗಿದ್ದಾರೆ" ಎಂದು ಆರೋಪಿಸಿದರು.
"2021-22ನೇ ಸಾಲಿನಲ್ಲಿ ಒಂದು, 2022-23ರ ಸಾಲಿನಲ್ಲಿ 17 ಕಾಮಗಾರಿಗಳಿಗೆ ಅನುನೋದನೆ ನೀಡಲಾಗಿತ್ತು. ಅದರಲ್ಲಿ 16 ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಆರು ಕೋಟಿ ರೂಪಾಯಿಯ ಕಾಮಗಾರಿಗಳನ್ನು ಅನುದಾನ ಲಭ್ಯತೆ ಆಧಾರದ ಮೇಲೆ ಕೈಗೆತ್ತಿಕೊಳ್ಳಲಾಗುವುದು" ಎಂದು ಭರವಸೆ ನೀಡಿದರು.
"ಶಾಸಕರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದಾಗ ಅನುದಾನ ಬೇಕಲ್ಲ" ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು. "ಎರಡು ಸಾವಿರ ಕೋಟಿ ಬಜೆಟ್ ಗಾತ್ರವಿದೆ, ಕಾಮಗಾರಿಗಳ ಹೊರೆ 15 ಸಾವಿರ ಕೋಟಿ ರೂಪಾಯಿ" ಎಂದು ಹೇಳಿದರು.
ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, "ರಾಜ್ಯದಲ್ಲಿ ಬರ ಇದ್ದರೂ 8 ತಿಂಗಳಲ್ಲಿ ರಾಜ್ಯ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ವಿರೋಧ ಪಕ್ಷಗಳಿಂದ ಟೀಕೆ ಟಿಪ್ಪಣಿ ಸಹಜ. ಇಂದು ಬೆಳಗ್ಗೆ ಪತ್ರಿಕೆಗಳಲ್ಲಿ ಸರ್ಕಾರವನ್ನು ಹೊಗಳಿ ಬರೆದಿದ್ದಾರೆ" ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಮತ್ತಿತರ ನಾಯಕರು, ಒಂದು ಸುಳ್ಳಲ್ಲ, ಎಲ್ಲಾ ಸುಳ್ಳೇ. ರಾಜ್ಯಪಾಲರ ಭಾಷಣದಲ್ಲಿ ಸುಳ್ಳುಗಳ ಕಂತೆ ಇದೆ ಎಂದರು. ಆಗ ನರೇಂದ್ರಸ್ವಾಮಿ, "ನೀವು 15 ಲಕ್ಷ ರೂ. ಕೊಡುತ್ತೇವೆ ಎಂದು ಹೇಳಿದ್ದರಲ್ಲಾ, ನಿಮಗೆ ಯಾವ ನೈತಿಕತೆ ಇದೆ?. ನಿಮ್ಮಿಂದ ನಾವು ಪಾಠ ಹೇಳಿಸಿಕೊಳ್ಳಬೇಕಿಲ್ಲ" ಎಂದು ತಿರುಗೇಟು ನೀಡಿದರು. "ವಿಧಾನಸಭಾ ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಕಾರ್ಡ್‍ಗಳನ್ನು ವಿತರಿಸಿ ಅಧಿಕಾರಕ್ಕೆ ಬಂದೆವು. ಅದೇ ರೀತಿ ನುಡಿದಂತೆ ನಡೆದು 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಯಾವುದೇ ತಾರತಮ್ಯವಿಲ್ಲದೆ, ಅನುಷ್ಠಾನಗೊಳಿಸಿದ್ದೇವೆ" ಎಂದು ಹೇಳಿದರು.
ಆರ್ಥಿಕ, ಕೈಗಾರಿಕೆ, ಸೇವಾ ರಂಗದಲ್ಲೂ ನಮ್ಮ ಸರ್ಕಾರ ಹೊಸ ಭರವಸೆ ಮೂಡಿಸಿದೆ. ಡಿಬಿಟಿ ಮೂಲಕ ಹಣವನ್ನು ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡಿದ್ದೇವೆ ಎಂದಾಗ ಆಕ್ಷೇಪಿಸಿ ಅರವಿಂದ್ ಬೆಲ್ಲದ್ ಅವರು, ಡಿಬಿಟಿ ಮೊದಲಿಗೆ ಜಾರಿ ಮಾಡಿದ್ದು ನಾವು ಎಂದರು.
ಮಾತು ಮುಂದುವರೆಸಿದ ನರೇಂದ್ರಸ್ವಾಮಿ, "ಶಕ್ತಿ ಯೋಜನೆಯಲ್ಲಿ 3.5 ಕೋಟಿ ಮಹಿಳೆಯರು ಬಸ್‍ಗಳಲ್ಲಿ ಫ್ರೀಯಾಗಿ ಪ್ರಯಾಣಿಸಿದ್ದಾರೆ. ಗೃಹ ಜ್ಯೋತಿ ಯೋಜನೆಯಲ್ಲಿ 1.6 ಕೋಟಿ ಜನರಿಗೆ ಅನುಕೂಲವಾಗಿದೆ. ಇವುಗಳು ಸುಳ್ಳು ಎನ್ನುವುದಾದರೆ ದಾಖಲೆ ಕೊಡಿ" ಎಂದು ಪ್ರತಿಪಕ್ಷಗಳನ್ನು ಆಗ್ರಹಿಸಿದರು.
ಇದನ್ನೂ ಓದಿ: ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಬಳಕೆ ಕಡ್ಡಾಯ: ವಿಧಾನಸಭೆಯಲ್ಲಿ ತಿದ್ದುಪಡಿ ವಿಧೇಯಕ ಮಂಡನೆ