ಕಲಬುರಗಿ: ಕಳೆದುಕೊಂಡ 22 ತೊಲಾ ಚಿನ್ನಾಭರಣವನ್ನು ಪತ್ತೆ ಹಚ್ಚುವಲ್ಲಿ ಕಲಬುರಗಿ ಪೊಲೀಸರು ಯಶಸ್ವಿಯಾಗಿದ್ದಾರೆ. ತಂಗಿಯ ನಿಶ್ಚಿತಾರ್ಥ ಕಾರ್ಯಕ್ರಮ ಎಂದು ಬಟ್ಟೆ ತುಂಬಿದ ಬ್ಯಾಗ್ನಲ್ಲಿ 22 ತೊಲಾ ಚಿನ್ನಾಭರಣ ತೆಗೆದುಕೊಂಡು ಹೋಗುತ್ತಿದ್ದ ಮಹಿಳೆ ಚಿನ್ನದ ಸಮೇತ ಬಟ್ಟೆ ಬ್ಯಾಗ್ ಅನ್ನು ಆಟೋದಲ್ಲೇ ಮರೆತು ಬಿಟ್ಟು ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ ಕೂಡಲೇ ಕಾರ್ಯಾಚರಣೆ ಕೈಗೊಂಡು ಕೇವಲ 24 ಗಂಟೆಗಳಲ್ಲಿ ಚಿನ್ನಾಭರಣ ಪತ್ತೆ ಹಚ್ಚುವಲ್ಲಿ ಯಶ ಕಂಡಿದ್ದಾರೆ. ಒಂದು ದಿನದೊಳಗೆ ಮಹಿಳೆಗೆ ವಾಪಸ್ ಚಿನ್ನ ಸಿಗುವಂತೆ ಮಾಡಿದ ಪೊಲೀಸರನ್ನು ಸಾರ್ವಜನಿಕರು ಶ್ಲಾಘಿಸುತ್ತಿದ್ದಾರೆ.
ಕಲಬುರಗಿ ನಗರದ ಹಳೇ ಜೇವರ್ಗಿ ರಸ್ತೆಯ ನಿವಾಸಿ ರೇಖಾ ಮೇಳಕುಂದಿ ಅವರು ಸುಮಾರು 22 ತೊಲಾ ಚಿನ್ನಾಭರಣ ಮತ್ತು ತಮ್ಮ ಬಟ್ಟೆ ಇರುವ ಬ್ಯಾಗ್ ಹಿಡಿದು ಸಂತೋಷ ನಗರದಿಂದ ಬಸ್ ನಿಲ್ದಾಣದವರೆಗೆ ಆಟೋದಲ್ಲಿ ಬಂದಿದ್ದಾರೆ. ಜನತಾ ಬೇಕರಿ ಹತ್ತಿರ ಆಟೋದಿಂದ ಇಳಿದಿದ್ದಾರೆ. ಆದರೆ ಚಿನ್ನಾಭರಣವಿದ್ದ ಬಟ್ಟೆ ಬ್ಯಾಗ್ ಮರೆತು ಆಟೋದಿಂದ ಇಳಿದಿದ್ದಾರೆ.
ಬಸ್ ನಿಲ್ದಾಣದ ಒಳಗೆ ಹೋಗಿ ಕೆಲ ಹೊತ್ತಿನ ಬಳಿಕ ಬ್ಯಾಗ್ ನೆನಪಾಗಿ ಆಟೋ ಹುಡುಕಿದ್ದಾರೆ. ಅಷ್ಟೊತ್ತಿಗಾಗಲೇ ಆಟೋ ಹೊರಟು ಬೇರಡೆ ಹೋಗಿತ್ತು. ಗಾಬರಿಯಾದ ಮಹಿಳೆ ತಕ್ಷಣ ಅಶೋಕ ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಹಿರಿಯ ಅಧಿಕಾರಿಗಳ ಮಾರ್ಗದರ್ಶದಲ್ಲಿ ಪ್ರಕರಣ ಬೆನ್ನಟ್ಟಿದ ಠಾಣೆಯ ಪೊಲೀಸರು, ಸಂತೋಷ ನಗರ, ಯಾತ್ರಿಕ ನಿವಾಸ್, ಜನತಾ ಬೇಕರಿ ಹತ್ತಿರದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ.
ಆದರೆ ಆಟೋ ನಂಬರ್ ಪ್ಲೇಟ್ ಮಾತ್ರ ಕಂಡಿರಲಿಲ್ಲ. ಆಟೋ ಹಿಂಭಾಗದಲ್ಲಿ ಇದ್ದ ಜಾಹೀರಾತು ಕಾಣಿಸಿತ್ತು. ಇದರ ಜಾಡು ಹಿಡಿದು ಹೋದ ಪೊಲೀಸರು, ಜಾಹೀರಾತು ನೀಡಿದವರನ್ನು ಸಂಪರ್ಕಿಸಿ ಜಾಹೀರಾತು ಅಂಟಿಸಿದ 200 ಆಟೋಗಳ ಸಂಖ್ಯೆ ಮತ್ತು ಅವರ ಭಾವಚಿತ್ರ ತರಿಸಿಕೊಂಡು ಪರೀಶಿಲಿಸಿದ್ದಾರೆ. ಕೊನೆಗೆ ಆಟೋ ನಂಬರ್ ಪತ್ತೆ ಹಚ್ಚಿ ಬಿದ್ದಾಪೂರ ಕಾಲೋನಿಯಲ್ಲಿರಯವ ಆಟೋ ಚಾಲಕನ ಮನೆಗೆ ತೆರಳಿ ಚಿನ್ನಾಭರಣ ಸಮೇತ ಬ್ಯಾಗ್ ವಶಕ್ಕೆ ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ.
ಇದನ್ನೂ ಓದಿ: ಪಿಎಸ್ಐ ಅಮಾನತಿಗೆ ಆಗ್ರಹಿಸಿ ರಾಮನಗರದಲ್ಲಿ ವಕೀಲರ ಅಹೋರಾತ್ರಿ ಧರಣಿ: ಪೊಲೀಸ್ ಬಿಗಿ ಭದ್ರತೆ
ಪ್ರಕರಣ ನಡೆದು 24 ಗಂಟೆ ಒಳಗಾಗಿ ಅಂದಾಜು 14 ಲಕ್ಷ ಮೌಲ್ಯದ 22 ತೊಲಾ ಚಿನ್ನಾಭರಣ ವಾಪಸ್ ಸಿಕ್ಕಿದ್ದು, ವಾರಸುದಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಪೊಲೀಸರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತ ಚೇತನ್ ಆರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮಗುವಿಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪಿರುವ ಆರೋಪ: ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟಿಸಿದ ಪೋಷಕರು