ಬೆಂಗಳೂರು: ''ಉದ್ಯಮಿ ಗೌತಮ್ ಅದಾನಿಯನ್ನು ಕೂಡಲೇ ಬಂಧಿಸಬೇಕು'' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ. ಸದಾಶಿವನಗರದಲ್ಲಿ ಮಾತನಾಡಿದ ಅವರು, ''ಅದಾನಿ ಮಾಡುವುದು ನೋಡಿದರೆ ಕೂಡಲೇ ಮಿಲೇನಿಯರ್ಸ್ ಆಗಬೇಕು ಎಂಬ ಆಸೆಯಿದೆ. ಅವರಿಗೆ ಉತ್ತೇಜನ ಮಾಡುತ್ತಿರುವುದು ಪ್ರಧಾನಿ ಮೋದಿ, ಅಮಿತ್ ಶಾ. ಈ ವಿಚಾರವನ್ನು ಸಂಸತ್ನಲ್ಲಿ ಮಾತನಾಡುತ್ತೇವೆ. ಅವರನ್ನು ಕೂಡಲೇ ಬಂಧನ ಮಾಡಬೇಕು ಅಂತ ಒತ್ತಾಯ ಮಾಡುತ್ತೇವೆ'' ಎಂದರು.
''ಎಷ್ಟೋ ಸಲ ಅದಾನಿ ಅವರು ಕಾನೂನು ಬಾಹಿರ ಕೆಲಸ ಮಾಡುತ್ತಿದ್ದಾರೆ, ಮೋದಿ ಅದಾನಿಯನ್ನು ರಕ್ಷಣೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ಅವರು ಭಾಗಿಯಾಗಿದ್ದಾರೆ ಅಂತ ಹೇಳಿದ್ದೆವು. ಆದರೂ ಮೋದಿ ಒಂದು ಶಬ್ದ ಚಕಾರ ಎತ್ತಲಿಲ್ಲ. ಅಮಿತ್ ಶಾ ಕಡೆ ಇ.ಡಿ ಇದೆ, ಸಿಬಿಐ ಇದೆ. ನಾವು ಹೇಳಿದರೆ ಅದು ರಾಜಕೀಯ ಅಂತ ನೀವು ಹೇಳಬಹುದು. ಆದರೆ ವಿದೇಶದಲ್ಲಿ ಈಗ ಆರೋಪ ಮಾಡುತ್ತಿದ್ದಾರೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ, ರಕ್ಷಿಸುತ್ತಿರುವವರು ಯಾರು? ಸಿಎಂ ಸಿದ್ದರಾಮಯ್ಯ
''ಏರ್ಪೋರ್ಟ್ಗೆ ಸರ್ಕಾರದ ಜಮೀನು ಕೊಡುತ್ತಿದ್ದಾರೆ. ನ್ಯಾಯಯುತವಾಗಿ ಮಾಡಿದರೆ ನಮ್ಮದೇನೂ ತಕರಾರು ಇಲ್ಲ. ಸರ್ಕಾರಿ ಜಮೀನು ತೆಗೆದುಕೊಂಡು ಹೀಗೆ ಭ್ರಷ್ಟಾಚಾರ ಮಾಡುತ್ತಾರೆ. ಸರ್ಕಾರ ಅವರಿಗೆ ಸಪೋರ್ಟ್ ಇದೆ. ಜೊತೆಗೆ ಅದಾನಿ ಮುಖಾಂತರ ಇವರ ಪಕ್ಷಕ್ಕೆ ಸಹಾಯ ಆಗುತ್ತಿದೆ ಅಂತ ಅನ್ನಿಸುತ್ತಿದೆ'' ಎಂದು ಖರ್ಗೆ ಆರೋಪಿಸಿದ್ದಾರೆ.
''ನ್ಯಾಯ, ಸ್ವಚ್ಛ ಅಂತ ಭಾಷಣ ಮಾಡುವುದಲ್ಲ, ನಡವಳಿಕೆ ಕೂಡ ಸ್ವಚ್ಛ ಇರಬೇಕಲ್ಲ. ಇದರಿಂದ ಆಲ್ ಇಂಡಿಯಾ ಡೆವಲಪ್ಮೆಂಟ್ ಆಗಲ್ಲ. ಒಬ್ಬನಿಗೆ ಶ್ರೀಮಂತ ಮಾಡುವುದರಿಂದ ಸಣ್ಣಪುಟ್ಟ ಇಂಡಸ್ಟ್ರಿಗಳಿಗೆ ಸಮಸ್ಯೆ ಆಗುತ್ತದೆ. ಬೇಕಾದವರಿಗೆ ಇಷ್ಟು ಸಹಾಯ ಮಾಡಿದರೆ, ಉಳಿದ ಇಂಡಸ್ಟ್ರೀಸ್ ಏನಾಗಬೇಕು'' ಎಂದು ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಉದ್ಯಮಿ ಅದಾನಿ ಬಂಧಿಸಿ, ಸೆಬಿ ಮುಖ್ಯಸ್ಥರ ವಿರುದ್ಧ ತನಿಖೆ ನಡೆಸಿ: ರಾಹುಲ್ ಗಾಂಧಿ ಆಗ್ರಹ