ಬೆಂಗಳೂರು: ಅಂತರ್ಜಾಲ ವಾಣಿಜ್ಯ ವ್ಯಪಾರ ಕಂಪನಿಯಾಗಿರುವ (ಇ-ಕಾಮರ್ಸ್) ಅಮೆಜಾನ್‌ನಿಂದ ಅಸಲಿ ಉತ್ಪನ್ನಗಳನ್ನು ಖರೀದಿಸಿ, ಬಳಿಕ ನಕಲಿ ವಸ್ತುಗಳನ್ನು ಹಿಂದಿರುಗಿಸುವ ಮೂಲಕ ಒಟ್ಟು 69 ಲಕ್ಷ ರೂ. ಮರುಪಾವತಿ ಪಡೆದು ವಂಚಿಸಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ.
ಎಫ್‌ಐಆರ್ ರದ್ದು ಕೋರಿ ಬೆಂಗಳೂರಿನ ಸೌರೀಷ್ ಬೋಸ್ ಮತ್ತು ದೀಪನ್ವಿತ ಘೋಷ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕಟಿಸಿದೆ. ಜೊತೆಗೆ, ಇದೊಂದು ಆಧುನಿಕ ಯುಗದ ಅಪರಾಧ ಎಂದು ಮೌಖಿಕವಾಗಿ ನುಡಿದ ನ್ಯಾಯಮೂರ್ತಿಗಳು, ಅರ್ಜಿ ವಜಾಗೊಳಿಸಿರುವುದಾಗಿ ತಿಳಿಸಿದರು. ವಿಸ್ತೃತ ತೀರ್ಪು ಇನ್ನಷ್ಟೇ ಪ್ರಕಟವಾಗಬೇಕಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ವಿರುದ್ಧದ ಆರೋಪಗಳ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದ ನ್ಯಾಯಾಲಯ, ''ಪ್ರಕರಣದಲ್ಲಿ ದಿಗ್ಭ್ರಮೆ ಹುಟ್ಟಿಸುವ ವಿಚಾರಗಳು ಅಡಗಿವೆ. ಅವುಗಳನ್ನು ಪರಿಗಣಿಸಬೇಕಿದೆ. ಇದೊಂದು ಚತುರ ವಂಚನಾ ವಿಧಾನ'' ಎಂದು ನುಡಿದಿತ್ತು.
ಪ್ರಕರಣದ ಹಿನ್ನೆಲೆ: ಹಲವು ವರ್ಷಗಳ ಕಾಲ ಅಮೆಜಾನ್‌ನಿಂದ ಅಸಲಿ ಉತ್ಪನ್ನಗಳನ್ನು ಖರೀದಿಸಿ, ಆನಂತರ ನಕಲಿ ಉತ್ಪನ್ನ ಎಂದು ಹಿಂದಿರುಗಿಸಿ ಮರುಪಾವತಿ ಪಡೆಯುತ್ತಿರುವ ಕಾರ್ಯ ವಿಧಾನವನ್ನು ಕಂಪನಿಯ ಉದ್ಯೋಗಿ ಪತ್ತೆ ಹಚ್ಚಿದ್ದರು. 2017ರಲ್ಲಿ ಇಬ್ಬರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್ 66ರಡಿ ದೂರು ದಾಖಲಿಸಲಾಗಿತ್ತು.
ಇದನ್ನೂ ಓದಿ: ವಕ್ಫ್ ಮಂಡಳಿಯಿಂದ ವಿವಾಹ ನೋಂದಣಿ ಪ್ರಮಾಣಪತ್ರ ವಿತರಣೆ ಆದೇಶಕ್ಕೆ ಹೈಕೋರ್ಟ್ ತಡೆ
ಅಮೆಜಾನ್‌ನಲ್ಲಿ ದುಬಾರಿ ಬೆಲೆಯ ಉತ್ಪನ್ನಗಳನ್ನು ಖರೀದಿಸುತ್ತಿದ್ದ ಬೋಸ್, ಅವುಗಳಿಗೆ ತನ್ನ ಬ್ಯಾಂಕ್ ಖಾತೆಯಿಂದ ಹಣ ಪಾವತಿಸುತ್ತಿದ್ದರು. ಅದು ವಿಳಾಸಕ್ಕೆ ತಲುಪಿದ ಬಳಿಕ 24 ಗಂಟೆಗಳಲ್ಲಿ ಅಸಲಿ ಉತ್ಪನ್ನಗಳ ಬಾಕ್ಸ್‌ಗಳಿಗೆ ನಕಲಿ ಉತ್ಪನ್ನಗಳನ್ನು ಇಟ್ಟು ಅಮೆಜಾನ್‌ಗೆ ಮರಳಿಸಿ, ನಗದು ಮರುಪಾವತಿ ಪಡೆಯುತ್ತಿದ್ದರು ಎಂದು ದೂರಿನಲ್ಲಿ ವಿವರಿಸಲಾಗಿತ್ತು.
ಪ್ರಕರಣದ ಸಂಬಂಧ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದನ್ನು ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಅಪ್ರಾಪ್ತೆಯ ಅತ್ಯಾಚಾರಗೈದು ಗರ್ಭಪಾತ: ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, ₹50 ಸಾವಿರ ದಂಡ