ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಜಯಭೇರಿ ಬಾರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ 6,52,321 ಮತಗಳನ್ನು ಪಡೆಯುವ ಮೂಲಕ 27205 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಲಬುರಗಿಗೆ 2019ರ ಚುನಾವಣೆಯಲ್ಲಿ ಬಿಜೆಪಿ ಲಗ್ಗೆ ಇಟ್ಟಿದೆ. ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು 2019ರ ಚುನಾವಣೆಯಲ್ಲಿ ಉಮೇಶ್ ಜಾಧವ್ ಸೋಲಿಸುವ ಮೂಲಕ ಬಿಜೆಪಿ ವಿಜಯ ಪತಾಕೆ ಹಾರಿಸಿತ್ತು. ಪ್ರಸಕ್ತ ಚುನಾವಣೆಯಲ್ಲಿ ಖರ್ಗೆ ಅವರು ತಮ್ಮ ಅಳಿಯನನ್ನೇ ಅಖಾಡಕ್ಕಿಳಿಸುವ ಮೂಲಕ ಮತ್ತೆ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ನ ರಾಧಾಕೃಷ್ಣ ದೊಡ್ಮನಿ ಅವರಿಗೆ ಇದು ಮೊದಲ ಚುನಾವಣೆಯಾಗಿದ್ದರೆ, ಬಿಜೆಪಿಯ ಉಮೇಶ್ ಜಾಧವ್ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ.
ಕ್ಷೇತ್ರ ಮಾಹಿತಿ: ಕಲಬುರಗಿ ಲೋಕಸಭಾ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಅಫಜಲಪುರ, ಜೇವರ್ಗಿ, ಚಿತ್ತಾಪೂರ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಕಲಬುರಗಿ ಗ್ರಾಮೀಣ, ಸೇಡಂ ಮತ್ತು ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನ ಕ್ಷೇತ್ರಗಳು ಈ ಲೋಕಸಭಾ ವ್ಯಾಪ್ತಿಯಲ್ಲಿವೆ.
ಕಲಬುರಗಿ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6ನ್ನು ಕಾಂಗ್ರೆಸ್ ಶಾಸಕರೇ ಪ್ರತಿನಿಧಿಸುತ್ತಿದ್ದಾರೆ. ತಲಾ ಒಂದೊಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದಾರೆ.
ಹೀಗಾಗಿ ಗೆಲುವಿನ ವಿಶ್ವಾಸದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಇದ್ದಾರೆ. ರಾಧಾಕೃಷ್ಣ ಅವರು ರಾಜಕಾರಣಕ್ಕೆ ಹೊಸಬರಲ್ಲ. ಮಲ್ಲಿಕಾರ್ಜುನ್ ಖರ್ಗೆ ಅವರ ರಾಜಕೀಯ ಬದುಕಿಗೆ ಬೆನ್ನೆಲುಬಾಗಿ ನಿಂತಿದ್ದರು. ಈ ಬಾರಿ ಅವರೇ ನೇರವಾಗಿ ಚುನಾವಣಾ ಕಣಕ್ಕಿಳಿದಿರುವುದು ವಿಶೇಷ.
ಮಲ್ಲಿಕಾರ್ಜುನ್ ಖರ್ಗೆ ಅವರ ರಾಜಕೀಯ ಕರ್ಮಭೂಮಿ ಕಲಬುರಗಿ ಕ್ಷೇತ್ರ. ಇಲ್ಲಿಂದ ಅವರು 10 ಬಾರಿ ಶಾಸಕರಾಗಿ, 2 ಬಾರಿ ಸಂಸದರಾಗಿಯೂ ಆಯ್ಕೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಅವರು ಬಿಜೆಪಿಯ ಉಮೇಶ್ ಜಾಧವ್ ವಿರುದ್ಧ ಸೋತಿದ್ದರು. ಕ್ಷೇತ್ರವನ್ನು ಮರಳಿ ಪಡೆಯಲು ಅವರು ಅಳಿಯನ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು.
ಕ್ಷೇತ್ರದಲ್ಲಿ ಒಟ್ಟು 20,98,202 ಸಾಮಾನ್ಯ ಮತದಾರರಿದ್ದರೆ, 576 ಸೇವಾ ಮತದಾರಿದ್ದಾರೆ. ಮೇ 7 ರಂದು ನಡೆದ ಚುನಾವಣೆಯಲ್ಲಿ ಶೇಕಡಾ 61.73 ರಷ್ಟು ಮತದಾನವಾಗಿತ್ತು. 2019 ರಲ್ಲಿ ಶೇಕಡಾ 61.13 ರಷ್ಟು ಮತದಾನವಾಗಿತ್ತು.