ಕೊಪ್ಪಳ: ಚನ್ನಪಟ್ಟಣ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡ್ತೀನಿ ಅಂತ ಎಲ್ಲೂ ಬಹಿರಂಗವಾಗಿ ನಾನು ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಅಂತಿಮವಾಗಿ ಎನ್ಡಿಎ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ. ಚನ್ನಪಟ್ಟಣ ವಿಧಾನಸಭಾ ಕ್ಷೇತದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗುವುದು. ಒಟ್ಟಿನಲ್ಲಿ ಎನ್ಡಿಎ ಅಭ್ಯರ್ಥಿಯೇ ಗೆಲ್ಲಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಸದಸ್ಯತ್ವ ನೋಂದಣಿ ಹಾಗೂ ಬೂತ್ ಕಮಿಟಿ ರಚನೆ ಹಿನ್ನೆಲೆ ಕೊಪ್ಪಳಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಕುಮಾರಣ್ಣ ಅವರು ಪ್ರತಿನಿಧಿಸಿದಂತಹ ಕ್ಷೇತ್ರ, ಅನಿರೀಕ್ಷಿತ ರಾಜಕಾರಣದ ಬೆಳವಣಿಗೆಗಳಿಂದ ದೆಹಲಿಗೆ ಹೋದರು. ನಾನು ನಿರಂತರವಾಗಿ ಕ್ಷೇತ್ರಕ್ಕೆ ಭೇಟಿ ಕೊಡುತ್ತಿದ್ದೇನೆ. ಪ್ರತಿ ಪಂಚಾಯಿತಿ ಮಟ್ಟಕ್ಕೆ ಭೇಟಿ ನೀಡಿ, ಮುಖಂಡರುಗಳ ಅಭಿಪ್ರಾಯವನ್ನು ಸಂಗ್ರಹಣೆ ಮಾಡುತ್ತಿದ್ದೇನೆ. ಇವೆಲ್ಲವನ್ನು ಕೂಡ ಪಕ್ಷದ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಾವು ಒಟ್ಟಾಗಿ ಇದ್ದೇವೆ, ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷವನ್ನು ದೂರವಿಡುವುದಕ್ಕೆ ಎನ್ಡಿಎ ಅಭ್ಯರ್ಥಿ ಗೆಲುವಿಗೆ ನಾವೆಲ್ಲರೂ ಒಟ್ಟಾಗಿ ಶ್ರಮಿಸುತ್ತೇವೆ ಎಂದರು.
ನಟ ದರ್ಶನಗೆ ಜೈಲಲ್ಲಿ ವಿಶೇಷ ನೀಡಿರುವುದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ. ಇನ್ಮುಂದೆ ಇಂತಹ ಪ್ರಕರಣ ಮತ್ತೆ ವರದಿಯಾಗದಿರಲಿ. ಸರ್ಕಾರ, ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂದು ಹೇಳಿದರು.
ಜೆಡಿಎಸ್ ತತ್ವ ಸಿದ್ಧಾಂತಗಳನ್ನು ಮಾರಿಕೊಂಡಿಲ್ಲ: ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರು ಜಾತ್ಯತೀತ ನೆಲೆಗಟ್ಟಿನ ಮೇಲೆ ಜೆಡಿಎಸ್ ಪಕ್ಷ ಕಟ್ಟಿದ್ದಾರೆ. ನಾವು ಬಿಜೆಪಿ ಜೊತೆ ಸಖ್ಯ ಬೆಳೆಸಿದ್ದೇವೆ ಎಂದ ಮಾತ್ರಕ್ಕೆ ನಮ್ಮ ತತ್ವ ಸಿದ್ಧಾಂತಗಳನ್ನು ನಾವು ಮಾರಿಕೊಂಡಿಲ್ಲ. ನಾವು ಎಲ್ಲಾ ಸಮುದಾಯದವರಿಗೂ ಅನುಕೂಲ ಮಾಡಿಕೊಟ್ಟಿದ್ದೇವೆ. ದೇವೇಗೌಡರು ಮುಸ್ಲಿಂ ಸಮುದಾಯದವರಿಗೂ ಮೀಸಲಾತಿ ತಂದುಕೊಟ್ಟವರು. ನಾವು ಎಲ್ಲಾ ಸಮುದಾಯದವರ ಏಳಿಗೆಗೆ ದುಡಿಯುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಒಂದೂವರೆ ವರ್ಷ ಆಗಿದೆ. 5 ಗ್ಯಾರಂಟಿಗಳ ಹೆಸರಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. 5 ಗ್ಯಾರಂಟಿಗಳನ್ನ ಇದುವರೆಗೂ ಜನಗಳಿಗೆ ಕೊಟ್ಟಿಲ್ಲ. ರಾಜ್ಯಗಳಲ್ಲಿ ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯಗಳ ಪರಿಸ್ಥಿತಿ ಏನಾಗಿದೆ? ಆರ್ಥಿಕ ಪರಿಸ್ಥಿತಿ ಏನಾಗಿದೆ?. ಮಾಧ್ಯಮದಲ್ಲಿ ನಾವೇ ನೋಡ್ತಾ ಇದ್ದೇವೆ. ಹಾಗಾಗಿ ಇದು ಸುಮ್ಮನೆ ವೈಯಕ್ತಿಕವಾಗಿ ಮಾತಾಡುವಂತ ವಿಚಾರ ಅಲ್ಲ. ಸಾಕಷ್ಟು ರೈತರು ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಹಿಂದುಳಿದ ಜನಾಂಗದ ಹೆಸರಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿರುವ ಮುಖ್ಯಮಂತ್ರಿಗಳು ಇವೆಲ್ಲದಕ್ಕೂ ಉತ್ತರ ಕೊಡಿ ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕಾಗುತ್ತದೆ, ಕಾದು ನೋಡಿ: ಬಿ.ವೈ. ವಿಜಯೇಂದ್ರ - B Y Vijayendra reaction on CM