ಬೆಂಗಳೂರು: ಒಂದೆಡೆ ದಕ್ಷಿಣ ಶಿಕ್ಷಕರ ಕ್ಷೇತ್ರದ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿ ವಿವೇಕಾನಂದ ಅವರಿಗೆ ವರಿಷ್ಠರು ಬಿ ಫಾರಂ ನೀಡಿದ್ದರೆ, ಇನ್ನೊಂದೆಡೆ ಜೆಡಿಎಸ್‌ನಿಂದ ಟಿಕೆಟ್ಗೆ ಕೆ.ಟಿ.ಶ್ರೀಕಂಠೇಗೌಡ ಪಟ್ಟು ಹಿಡಿದಿದ್ದಾರೆ.
ಈ ಕುರಿತು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿರುವ ಶ್ರೀಕಂಠೇಗೌಡ, 'ವಿಧಾನ ಪರಿಷತ್ ಚುನಾವಣೆಗೆ ನಾನು ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ನಿಮ್ಮ ಬಳಿ ಮತಯಾಚನೆಗೆ ಬರುತ್ತಿದ್ದೇನೆ. ನನ್ನೆಲ್ಲಾ ಶಿಕ್ಷಕ ವೃಂದದವರ ಕುಂದುಕೊರತೆಗಳನ್ನು ಪರಿಷತ್ತಿನಲ್ಲಿ ಎಲ್ಲರ ಮುಂದಿಟ್ಟು ಸಮಸ್ಯೆಗಳನ್ನು ಬಗೆಹರಿಸುತ್ತೇನೆ. ಈ ಪ್ರಯತ್ನಕ್ಕೆ ಮತ್ತೊಮ್ಮೆ ಶಿಕ್ಷಕ ವೃಂದದವರು ಆಶೀರ್ವಾದ ಮಾಡುವಂತೆ ಪ್ರಾರ್ಥಿಸುತ್ತಿದ್ದೇನೆ' ಎಂದು ಮನವಿ ಮಾಡಿದ್ದಾರೆ.
ಇನ್ನು, ಗೊಂದಲ ಗೂಡಾಗಿರುವ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಮೈತ್ರಿ ಆಕಾಂಕ್ಷಿಗಳಲ್ಲಿ ಟಿಕೆಟ್ ಪೈಪೋಟಿ ಜೋರಾಗಿದೆ. ವಿವೇಕಾನಂದ ಅವರಿಗೆ ಬಿ ಫಾರಂ ನೀಡಿದ್ದಕ್ಕೆ ಶ್ರೀಕಂಠೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದು, ಅವರಿಗೆ ಬಿ ಫಾರಂ ಕೊಟ್ಟ ವಿಚಾರ ನನಗೆ ಗೊತ್ತೇ ಇಲ್ಲ. ಇಂದು ಮಧ್ಯಾಹ್ನ ಟಿಕೆಟ್ ಸಂಬಂಧ ಸಭೆ ಕರೆದಿದ್ದಾರೆ. ನಾಮಪತ್ರ ಸಲ್ಲಿಸಲು ನಾನು ಸಿದ್ಧತೆ ಮಾಡಿಕೊಂಡಿದ್ದೇನೆ. ಮೈತ್ರಿ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ. ಹೀಗಾಗಿ, ಶ್ರೀಕಂಠೇಗೌಡರ ನಡೆ ಕುತೂಹಲ ಮೂಡಿಸಿದೆ.