ತುಮಕೂರು: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ತುಮಕೂರಿನಲ್ಲಿ ಪಕ್ಷಾಂತರ ಪರ್ವ ಭರ್ಜರಿಯಾಗಿ ನಡೆಯುತ್ತಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ನ ಮುಖಂಡರು ಪಕ್ಷ ಬದಲಿಸುತ್ತಿದ್ದಾರೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ ರಚಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಬಿಜೆಪಿಯ ವಿ.ಸೋಮಣ್ಣ ಗೆಲುವಿಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ತುಮಕೂರು ಪ್ರವಾಸ ಆರಂಭಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಹಾಗು ಮಾಜಿ ಶಾಸಕ ಹೆಚ್.ನಿಂಗಪ್ಪ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಬರ ಮಾಡಿಕೊಂಡ ದೇವೇಗೌಡರ ನಡೆ ಕಾಂಗ್ರೆಸ್ ಮುಖಂಡರ ಕಣ್ಣು ಕೆಂಪಾಗಿಸಿದೆ. ಇದೇ ವೇಳೆ 'ದಳ'ಪತಿಗಳಿಗೆ ಶಾಕ್ ಕೊಡಲು ಮುಂದಾದ ಕೈ ಪಡೆಯು ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡುತ್ತಿದೆ. ತುಮಕೂರು ನಗರದ ಜೆಡಿಎಸ್ ಮುಖಂಡ ಗೋವಿಂದರಾಜು ಅವರಿಗೆ ಗಾಳ ಹಾಕಿರುವ ನಾಯಕರು ಪಕ್ಷಕ್ಕೆ ಸೇರುವಂತೆ ಆಹ್ವಾನ ನೀಡಿದ್ದಾರೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿರುವ ಗೋವಿಂದರಾಜು, ತೆನೆ ಇಳಿಸಿ ಕೈ ಹಿಡೀತಾರಾ ಎಂಬ ಚರ್ಚೆ ನಡೆಯುತ್ತಿದೆ.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮನೆಯಲ್ಲಿ ಗೃಹ ಸಚಿವ ಕೆ.ಪರಮೇಶ್ವರ ನೇತೃತ್ವದಲ್ಲಿ ಗೌಪ್ಯ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಸಚಿವರ ಜತೆ ಶಾಸಕ ಎಸ್.ಆರ್.ಶ್ರೀನಿವಾಸ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭಾಗಿಯಾಗಿದ್ದಾರೆ. ಈ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಜಿದ್ದಾಜಿದ್ದಿಯ ಹೋರಾಟಕ್ಕೆ ವೇದಿಕೆ ಸಾಕ್ಷಿಯಾದಂತಾಗಿದೆ.
ವಿ.ಸೋಮಣ್ಣ ಕಸರತ್ತು: ಚುನಾವಣೆಯಲ್ಲಿ ಗೆಲುವು ಸಾಧಿಸಲು ವಿ.ಸೋಮಣ್ಣ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಸುದೀರ್ಘ ಪ್ರಚಾರ ನಡೆಸುತ್ತಿರುವ ಸೋಮಣ್ಣ ಇಂದು ಬೆಳಗ್ಗೆಯೇ ನಗರದಲ್ಲಿ ವಾಕ್ ಮಾಡುತ್ತಿದ್ದ ಮತದಾರರನ್ನು ಮಾತನಾಡಿಸಿ, ತಮಗೆ ಮತ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹಾಗೆಯೇ ಮೈದಾನದಲ್ಲಿ ತರಬೇತಿ ಪಡೆಯುತ್ತಿದ್ದ ಕ್ರೀಡಾಪಟುಗಳ ಜತೆಯೂ ಕಾಲಕಳೆದಿದ್ದಾರೆ.