ಬೆಂಗಳೂರು : ಮಾಜಿ ಸಂಸದ ಎಲ್. ಆರ್ ಶಿವರಾಮೇಗೌಡ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಹಾಸನದ ಪೆನ್ಡ್ರೈವ್ ಪ್ರಕರಣದ ಕುರಿತು ಮಾತನಾಡುವಾಗ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಂಭಾಷಣೆಯೊಂದು ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮಾಜಿ ಎಂಎಲ್ಸಿ ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಬಳಿಕ ಮಾತನಾಡಿದ ಜೆಡಿಎಸ್ ಮಾಜಿ ಎಂಎಲ್ಸಿ ರಮೇಶ್ ಗೌಡ, ''ಹಾಸನದ ಪೆನ್ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರದ್ದು ಏನೇ ತಪ್ಪಿದ್ದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿ. ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿಯ ತನಿಖಾ ವರದಿ ಬರಲಿ. ಕಾನೂನಾತ್ಮಕವಾಗಿ ಶಿಕ್ಷೆಯಾಗಲಿ ಎಂದು ಆರಂಭದಿಂದಲೂ ಸಹ ಪಕ್ಷದ ವರಿಷ್ಠರಾದ ದೇವೇಗೌಡರು, ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಆದರೆ, ಈ ಪ್ರಕರಣವನ್ನಿಟ್ಟುಕೊಂಡು ರಾಜ್ಯ ಸರ್ಕಾರ ದೇವೇಗೌಡರು, ಅವರ ಕುಟುಂಬಕ್ಕೆ ಮಸಿ ಬಳಿಯುವ ಹಾಗೂ ಅವರ ಸಾವನ್ನ ಬಯಸುತ್ತಿದೆ. ಕುಮಾರಣ್ಣ ಅವರ ರಾಜಕೀಯ ಭವಿಷ್ಯವನ್ನ ಅಂತ್ಯಗೊಳಿಸಲು ರಾಜ್ಯ ಸರ್ಕಾರದ ಪ್ರಭಾವಿ ಸಚಿವರುಗಳು ಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರಕ್ಕೆ ಕನಿಷ್ಠ ಮಾನ ಮರ್ಯಾದೆ ಇದ್ದಿದ್ದರೆ, ರಾಜ್ಯದ ಹೆಣ್ಣುಮಕ್ಕಳ ಬಗ್ಗೆ ಕಾಳಜಿಯಿದ್ದಿದ್ದರೆ ಇಂತಹ ನೀಚ ಕೆಲಸಕ್ಕೆ ಕೈ ಹಾಕಬಾರದಿತ್ತು'' ಎಂದು ಕಿಡಿಕಾರಿದರು.
ಅಲ್ಲದೇ ಎಲ್. ಆರ್ ಶಿವರಾಮೇಗೌಡರನ್ನ ಮುಂದಿಟ್ಟುಕೊಂಡು ದೇವರಾಜೇಗೌಡ ಜೈಲಿಗೆ ಹೋಗುವಂತೆ ಮಾಡಿದ್ದಾರೆ. ದೇವರಾಜೇಗೌಡ - ಶಿವರಾಮೇಗೌಡ ಮಾತನಾಡಿರುವುದು, ಅವರಿಬ್ಬರ ಜೊತೆ ಸರ್ಕಾರದ ಸಚಿವರು ಮಾತನಾಡಿರುವುದು ಜಗಜ್ಜಾಹೀರಾಗಿದೆ. ಯಾರು ಈ ಕೃತ್ಯದ ಹಿಂದಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೆನ್ ಡ್ರೈವ್ ಹಂಚಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಎಸ್ಐಟಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತೇವೆ ಎಂದು ಆಗ್ರಹಿಸಿದ್ದಾರೆ.