ಬೆಂಗಳೂರು: ಸರ್ಕಾರ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡದಿದ್ದಲ್ಲಿ ಯಾವುದೇ ಕಾರಣಕ್ಕೂ 2047 ಇರಲಿ, 2147ರ ತನಕವೂ ಸಹ ವಿಕಸಿತ ಭಾರತ ನಿರ್ಮಾಣ ಸಾಧ್ಯವಿಲ್ಲ ಎಂದು ದೆಹಲಿ ಅಭಿವೃದ್ಧಿ ಕಮಿಷನ್ ಮಾಜಿ ಉಪಾಧ್ಯಕ್ಷ ಜಾಸ್ಮಿನ್ ಶಾ ಅಭಿಪ್ರಾಯಪಟ್ಟರು.
ಭಾನುವಾರ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ದೆಹಲಿ ಮಾಡೆಲ್ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ ಬಳಿಕ ಮಾತನಾಡಿದ ಅವರು, 2015 ರಿಂದ 2023ರ ವರೆಗೆ ದೆಹಲಿಯಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್, ನೀರು, ಸಂಚಾರ, ಪರಿಸರ ಇನ್ನೂ ಮುಂತಾದ 60 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಮಾಡಿರುವ ಆಮೂಲಾಗ್ರ ಬದಲಾವಣೆಗಳಲ್ಲಿ ತಮ್ಮ ಪಾತ್ರವೂ ಸಹ ನೇರವಾಗಿ ಇದ್ದುದರಿಂದ ಈ ದೆಹಲಿ ಮಾಡೆಲ್ ಪುಸ್ತಕವನ್ನು ಬರೆಯಲು ಸಾಧ್ಯವಾಯಿತು ಎಂದರು. ವ್ಯವಸ್ಥೆಯ ಬದಲಾವಣೆಗಾಗಿ ಮಾಡಿರುವ ಅನೇಕ ಸುಧಾರಣೆಗಳನ್ನು ಪ್ರಾಮಾಣಿಕ ಹಾದಿಯಲ್ಲಿ ರಚನಾತ್ಮಕವಾಗಿ ಟೀಕಿಸದೆ ವಿರೋಧಪಕ್ಷಗಳು ಲೇವಡಿ ಮೂಲಕ ಅಪಪ್ರಚಾರ ಮಾಡುತ್ತಿರುವುದು ರಾಷ್ಟ್ರಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ಇಂದು ದೇಶದ ಸರ್ಕಾರಿ ಶಾಲೆಗಳಲ್ಲಿ ಫೇಲಾದ ವಿದ್ಯಾರ್ಥಿಗಳು ಮಾತ್ರ ಭರ್ತಿಯಾಗುತ್ತಾರೆ ಎನ್ನುವ ಸಂದರ್ಭದಲ್ಲಿ ದೆಹಲಿಯಲ್ಲಿ ಪ್ರತಿ ವರ್ಷ ಎರಡೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ದಾಖಲಾಗುತ್ತಿದ್ದಾರೆ. 25 ಸಾವಿರಕ್ಕೂ ಹೆಚ್ಚು ತರಗತಿಗಳಲ್ಲಿ ಅತ್ಯಾಧುನಿಕವಾಗಿ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನು ದೆಹಲಿಯ ಮಕ್ಕಳಿಗೆ ನೀಡಲಾಗುತ್ತಿದೆ. ಕಳೆದ ಹತ್ತು ವರ್ಷದಿಂದ 97% ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಭಾರತದ ಇತರ ರಾಜ್ಯಗಳಿಗೆ ಹೋಲಿಸಿದರೆ ದೆಹಲಿಯಲ್ಲಿನ ವಿದ್ಯುತ್ ಶಕ್ತಿ ಬೆಲೆ ಅತ್ಯಂತ ಕಡಿಮೆ ದರದಲ್ಲಿ ಸಿಗುತ್ತಿದ್ದು, ಕಳೆದ 10 ವರ್ಷಗಳಿಂದ ಯಾವುದೇ ಹೆಚ್ಚುವರಿ ಮಾಡಿಲ್ಲದಿರುವುದು ದೆಹಲಿ ಮಾಡೆಲ್ ನ ವಿಶೇಷವಾಗಿದೆ. ಇದೇ ರೀತಿ ಮೂಲಭೂತ ಸೌಕರ್ಯ, ಪರಿಸರ, ಸಂಚಾರ ಇನ್ನಿತರ ಕ್ಷೇತ್ರಗಳಲ್ಲಿ ಗಣನೀಯ ಸುಧಾರಣೆಯನ್ನು ಜಾರಿಗೊಳಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿಗೂ ನನಗೂ ಅವಿನಾಭಾವ ಸಂಬಂಧವಿದ್ದು ಐಟಿ ಕ್ಷೇತ್ರದಲ್ಲಿ ದುಡಿಯುತ್ತಿದ್ದಾಗ ಪ್ರತಿ ದಿನ 5 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ನಲ್ಲಿ ಇದ್ದದ್ದು ನನಗೆ ಈ ರೀತಿಯ ಸಾಧನೆಗೆ ಪ್ರೇರೇಪಣೆ ನೀಡಿದ್ದು ವಿಶೇಷ ಎಂದು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು, ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ಪತ್ರಕರ್ತೆ ಧನ್ಯ ರಾಜೇಂದ್ರನ್ ಹಾಜರಿದ್ದರು.
ಇದನ್ನೂ ಓದಿ; ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿ ಕೊಳೆಗೇರಿಗಳೆಲ್ಲ ನೆಲಸಮ: ಅರವಿಂದ್ ಕೇಜ್ರಿವಾಲ್