ಗಂಗಾವತಿ (ಕೊಪ್ಪಳ) : 500 ವರ್ಷಗಳಿಂದ ಸಾಕಷ್ಟು ಹೋರಾಟಗಳ ಮೂಲಕ ಅಯೋಧ್ಯೆ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ಆಶಯ ಪ್ರತಿಯೊಬ್ಬರದ್ದಾಗಿತ್ತು. ಇದೀಗ ರಾಮ ಮಂದಿರ ಕಟ್ಟುವ ಮೂಲಕ ಉದ್ಘಾಟನೆ ಮಾಡಿ ವಿಶ್ವದ ಗಮನ ಸೆಳೆದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಬೇಕು ಎಂದು ಶಾಸಕ ಜಿ.ಜನಾರ್ದನ ರೆಡ್ಡಿ ಹೇಳಿದರು.
ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವದ ನಿಮಿತ್ತ ಸಾರ್ವಜನಿಕ ಧ್ವಜಾರೋಹಣದ ಅಧ್ಯಕ್ಷತೆ ವಹಿಸಿ ಜಿ.ಜನಾರ್ದನ ರೆಡ್ಡಿ ಮಾತನಾಡಿದರು. ರಾಮ ಮಂದಿರ ವಿಚಾರದಲ್ಲಿ ಕಳೆದ ಐದು ನೂರು ವರ್ಷದಿಮದ ಎಷ್ಟೋ ಹೋರಾಟಗಳು ನಡೆದವು. ಎಷ್ಟೋ ಜನರ ಪ್ರಾಣ, ತ್ಯಾಗ ಬಲಿದಾನ ನಡೆದವು. ಆದರೆ, ಪ್ರಧಾನಿ ಮೋದಿ ಕಾನೂನು ಚೌಕಟ್ಟಿನೊಳಗೆ ಇಡೀ ವಿಶ್ವವೇ ಗಮನ ಸೆಳೆಯುವಂತೆ ವಿಷ್ಣುವಿನ ಅವತಾರ ರಾಮನ ಮಂದಿರ ನಿರ್ಮಾಣ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಹೀಗಾಗಿ ಇಡೀ ಭಾರತದ ಜನರು ನರೇಂದ್ರ ಮೋದಿ ಅವರನ್ನು ಮುಕ್ತವಾಗಿ ಅಭಿನಂದಿಸಬೇಕಿದೆ ಎಂದು ಬಣ್ಣಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿರುವ ಕ್ರಾಂತಿಕಾರಿ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಸೇರಿದಂತೆ ಸಾಕಷ್ಟು ಹೋರಾಟಗಾರರು ಮತ್ತು ಮಹಾನೀಯರು ಇಂದಿಗೂ ತೆರೆಮರೆಯಲ್ಲಿ ಸರಿದು ಹೋಗಿದ್ದಾರೆ. ಚರಿತ್ರೆಯಲ್ಲಿ ಅವರಿಗೆ ಅವಕಾಶ ಇಲ್ಲದಂತಾಗಿದೆ. ಕಿತ್ತೂರು ರಾಣಿ ಚನ್ನಮ್ಮರಂತ ಅನೇಕರನ್ನು ಸ್ಮರಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಮಹನೀಯರನ್ನು ಸ್ಮರಿಸುವ ಕೆಲಸ ನಿರಂತವಾಗಿ ನಡೆಯಬೇಕು ಎಂದು ಜನಾರ್ದರೆಡ್ಡಿ ತಿಳಿಸಿದರು.
ವೇದಿಕೆಯಲ್ಲಿ ತಹಸೀಲ್ದಾರ್ ನಾಗರಾಜ್ ಯು, ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಾಕ ಅಧಿಕಾರಿ ಲಕ್ಷ್ಮಿದೇವಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಇತರರಿದ್ದರು.
ಇದನ್ನೂ ಓದಿ : ಸರ್ಕಾರ ನೀಡಿದ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ, ಬದ್ಧತೆ ಮೆರೆದಿದೆ: ರಾಜ್ಯಪಾಲ ಗೆಹ್ಲೋಟ್