ಕಾರವಾರ(ಉತ್ತರ ಕನ್ನಡ): ನಾಗರಪಂಚಮಿ ಹಬ್ಬವನ್ನು ಇಲ್ಲಿನ ಜನಶಕ್ತಿ ವೇದಿಕೆ ವಿಶೇಷಚೇತನ ಮಕ್ಕಳಿಗೆ ಹಾಲು ಕೊಡುವ ಮೂಲಕ ವಿಭಿನ್ನವಾಗಿ ಆಚರಿಸಿತು. ಕಲ್ಲು ನಾಗರಕ್ಕೆ ಹಾಲೆರೆದರೆ ವ್ಯರ್ಥ ಎಂಬ ಉದ್ದೇಶದಿಂದ ವೇದಿಕೆಯ ಕಾರ್ಯಕರ್ತರು ಹಾಲಿನ ಜೊತೆಗೆ ಸಿಹಿ ತಿನಿಸುಗಳನ್ನು ವಿತರಿಸಿದರು.
ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಮಾತನಾಡಿ, "ಹಬ್ಬದ ಹೆಸರಿನಲ್ಲಿ ಜನರು ಹುತ್ತಗಳಿಗೆ, ನಾಗರಕಲ್ಲಿಗೆ ಹಾಲೆರೆದು ವ್ಯರ್ಥ ಮಾಡುತ್ತಾರೆ. ಇದರ ಬದಲು ನಿರ್ಗತಿಕರಿಗೆ, ಬಡ ಮಕ್ಕಳಿಗೆ ನೀಡಿದರೆ ಸಾರ್ಥಕತೆ, ಪುಣ್ಯ ಸಿಗುತ್ತದೆ. ಹೀಗಾಗಿ ಕಳೆದ ಹಲವಾರು ವರ್ಷಗಳಿಂದ ವೇದಿಕೆಯ ವತಿಯಿಂದ ನಾಗರಪಂಚಮಿಯಂದು ಮಕ್ಕಳಿಗೆ ಹಾಲು ಕೊಡುವ ಕಾರ್ಯ ಮಾಡುತ್ತಿದ್ದೇವೆ" ಎಂದು ತಿಳಿಸಿದರು.