ಹುಬ್ಬಳ್ಳಿ: ''ಜಗದೀಶ್ ಶೆಟ್ಟರ್ ತಮ್ಮ ಸ್ವಾರ್ಥಕ್ಕಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಸ್ಥಾನಮಾನ ನೀಡಿದರೂ ಸಹ ಅವರು ಪಕ್ಷ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ. ಇಂತಹ ರಾಜಕಾರಣಿಯ ಹಿಂದೆ ಸಮುದಾಯ ಇಲ್ಲ'' ಎಂದು ವೀರಶೈವ ಲಿಂಗಾಯತ ಸಮುದಾಯದ ಕೆಲವು ಮುಖಂಡರು ಹರಿಹಾಯ್ದಿದ್ದಾರೆ.
ನಗರದಲ್ಲಿ ಭಾನುವಾರ ಜಗದೀಶ್ ಶೆಟ್ಟರ್ ಪಕ್ಷಾಂತರ ಮಾಡಿದ ಹಿನ್ನೆಲೆಯಲ್ಲಿ ಸಮುದಾಯದ ಮುಖಂಡರ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು. ಮಾಜಿ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ ಮಾತನಾಡಿ, ''ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಪಕ್ಷ ಗೌರವಿಸಿತ್ತು. ಶೆಟ್ಟರ್ ಯಾಕೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೂ ಎಂಬುದು ಇನ್ನೂ ನಿಗೂಢವಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಅವರು ಶೆಟ್ಟರ್ ಅವರನ್ನು ಚೆನ್ನಾಗಿ ನೋಡಿಕೊಂಡಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ. ಆದರೆ, ಬಿಜೆಪಿ ಪುನಃ ಏಕೆ ಸೇರಿದ್ದಾರೆಂಬುದು ಯಕ್ಷ ಪ್ರಶ್ನೆ'' ಎಂದರು.
''ಈ ಹಿಂದೆ ಜಗದೀಶ್ ಶೆಟ್ಟರ್ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಬಿಜೆಪಿ ವಿರುದ್ಧ ಹಿಗ್ಗಾಮುಗ್ಗ ಮಾತನಾಡುತ್ತಿದ್ದರು. ಇದೀಗ ಎಲ್ಲ ತತ್ವ ಸಿದ್ಧಾಂತ ಧಿಕ್ಕರಿಸಿ ಬಿಜೆಪಿಗೆ ಸೇರಿದ್ದಾರೆ. ಬಿಹಾರದಲ್ಲಿ ನಿತೀಶ್ ಕುಮಾರ್ ಪಕ್ಷಾಂತರ ಮಾಡುವುದನ್ನು ನಾವು ನೋಡುತ್ತಿದ್ದೇವೆ. ಆದರೆ, ಹುಬ್ಬಳ್ಳಿಯಲ್ಲೂ ಮತ್ತೊಬ್ಬ ನಿತೀಶ್ ಕುಮಾರ್ ಹುಟ್ಟಿದ್ದಾರೆ. ಶೆಟ್ಟರ್ ಹುಬ್ಬಳ್ಳಿಯ ನಿತೀಶ್ ಕುಮಾರ್'' ಎಂದು ವಾಗ್ದಾಳಿ ನಡೆಸಿದರು.
''ಶೆಟ್ಟರ್ ಬಿಜೆಪಿ ಸೇರ್ಪಡೆಯಿಂದ ತೆರವಾದ ಪರಿಷತ್ ಸ್ಥಾನಕ್ಕೆ ಜಿಲ್ಲೆಯ ವೀರಶೈವ ಲಿಂಗಾಯತ ಯಾರಾದರೂ ಮುಖಂಡರಿಗೆ ಅವಕಾಶ ನೀಡಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಓರ್ವರಿಗೆ ಸ್ಥಾನ ನೀಡಬೇಕು, ನಿಗಮ ಮಂಡಳಿಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಕೊಡಬೇಕು'' ಎಂದು ಹಕ್ಕೊತ್ತಾಯ ಮಂಡಿಸಿದರು.
ಇದೇ ವೇಳೆ ಮಾತನಾಡಿದ ಮುಖಂಡರಾದ ವಿಜಯ ಕುಲಕರ್ಣಿ ಹಾಗೂ ಶರಣಪ್ಪ ಕೊಟಗಿ, ''ಜಗದೀಶ್ ಶೆಟ್ಟರ್ ಐಟಿ, ಇಡಿ ಬೆದರಿಕೆಗೆ ಅಂಜಿ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಶೆಟ್ಟರ್ ತೆರಳಿಕೆಯಿಂದ ಯಾವುದೇ ನಷ್ಟವಾಗಿಲ್ಲ. ಅವರು ಪಕ್ಷ ಸೇರ್ಪಡೆಗೊಂಡಾಗ ಅವರ ಹಿಂದೆ ಸಮಾಜದ ನೂರಾರು ಜನರು ಆಗಮಿಸುತ್ತಾರೆಂಬ ನಿರೀಕ್ಷೆ ಹುಸಿಯಾಗಿದೆ. ಅವರ ಜೊತೆಗೆ ಲೆಫ್ಟ್ ರೈಟ್ ಬಿಟ್ಟರೆ ಯಾವೊಬ್ಬ ಪಾಲಿಕೆ ಸದಸ್ಯರಾಗಲಿ, ಕಾರ್ಯಕರ್ತರಾಗಲಿ ಪಕ್ಷಕ್ಕೆ ಸೇರ್ಪಡೆಯಾಗಲಿಲ್ಲ. ಇದನ್ನು ನೋಡಿದರೆ ಅವರು ಜನ ನಾಯಕರಲ್ಲ ಎನ್ನುವುದು ಸ್ಪಷ್ಟ'' ಎಂದು ಗರಂ ಆದರು.
ಶಾಮನೂರು ಶಿವಶಂಕರಪ್ಪ ಅವರು, ಬಿ.ವೈ. ರಾಘವೇಂದ್ರ ಅವರಿಗೆ ಆರಿಸಿ ತನ್ನಿ ಎಂಬ ಬಹಿರಂಗ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ಶಾಮನೂರು ಶಿವಶಂಕರಪ್ಪನವರಿಗೆ ವಯಸ್ಸಾಗಿದೆ. ಅವರ ಹೇಳಿಕೆಗೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇಲ್ಲ'' ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಬಾಪುಗೌಡ ಪಾಟೀಲ, ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಪಿ.ಕೆ. ರಾಯನಗೌಡ, ಅರವಿಂದ ಕಟಗಿ, ಸುರೇಶ ಸವಣೂರು, ಪ್ರಕಾಶಗೌಡ ಪಾಟೀಲ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಶೆಟ್ಟರ್ ಬೆಳಗಾವಿಯಿಂದ ಸ್ಪರ್ಧಿಸಿದರೆ, ಅಲ್ಲಿ ವ್ಯಕ್ತಿ ಮುಖ್ಯವಲ್ಲ, ಪಕ್ಷ ಪ್ರಮುಖವಾಗುತ್ತೆ: ಸತೀಶ್ ಜಾರಕಿಹೊಳಿ