ಕಾರವಾರ(ಉತ್ತರಕನ್ನಡ):ಮಾಲ್ಡೀವ್ಸ್ ಭಾರತಕ್ಕೆ ಉಲ್ಟಾ ಹೊಡೆದ ಬಳಿಕ ಪ್ರಧಾನಿ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಪ್ರವಾಸೋದ್ಯಮ ಪ್ರೋತ್ಸಾಹಿಸುವ ಮೂಲಕ ಮಾಲ್ಡೀವ್ಸ್‌ಗೆ ದೊಡ್ಡ ಹೊಡೆತ ನೀಡಿದ್ದಾರೆ.
ಆ ಬಳಿಕ ದೇಶದಲ್ಲಿರುವ ಆಕರ್ಷಣೀಯ ಪ್ರವಾಸಿ ತಾಣಗಳನ್ನು ಗುರುತಿಸುವ ಅಭಿಯಾನ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಇಂತಹ ಆಕರ್ಷಕ ಪ್ರವಾಸಿ ಸ್ಥಳಗಳ ಗುಂಪಿಗೆ ಸೇರಿರುವ ಉತ್ತರಕನ್ನಡ ಜಿಲ್ಲೆಯ ಸಮುದ್ರದಲ್ಲಿರುವ ವಿವಿಧ ಐಲ್ಯಾಂಡ್‌ಗಳು ಜನರ ಮನಸೆಳೆಯುತ್ತಿವೆ. ಆದರೆ, ಬ್ರಿಟೀಷರ ಕಾಲದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದ ಐತಿಹಾಸಿಕ ಈ ಐಲ್ಯಾಂಡ್‌ಗಳು ಯಾವುದೇ ಅಭಿವೃದ್ಧಿ ಕಾಣದೇ ಹಾಳು ಕೊಂಪೆಯಂತಾಗಿವೆ. ಉತ್ತರಕನ್ನಡ ವ್ಯಾಪ್ತಿಯ ಸಮುದ್ರದ ಐಲ್ಯಾಂಡ್‌ಗಳು ಸರಕಾರಗಳಿಂದಲೂ ಸಾಕಷ್ಟು ನಿರ್ಲಕ್ಷ್ಯಕ್ಕೊಳಗಾಗಿವೆ.
ಬೆರಳೆಣಿಕೆಯಷ್ಟು ಐಲ್ಯಾಂಡ್‌ಗಳಿಗೆ ಮಾತ್ರ ಪ್ರವಾಸಿಗರಿಗೆ ಪ್ರವೇಶ: ಹೌದು.. ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ನೈಸರ್ಗಿಕ ದತ್ತ ಅರಣ್ಯ, ಜಲಪಾತ, ನದಿ ಹಾಗೂ ಸಮುದ್ರವನ್ನು ಪ್ರವಾಸಿಗರು ನೋಡಬಹುದು. ಆದರೆ ಜಿಲ್ಲೆಯ ವ್ಯಾಪ್ತಿ ಒಳಪಡುವ ಅರಬ್ಬೀ ಸಮುದ್ರದಲ್ಲಿ ಸಾಕಷ್ಟು ಐಲ್ಯಾಂಡ್‌ಗಳಿವೆ. ಕೇವಲ ಬೆರಳೆಣಿಕೆಯಷ್ಟು ಐಲ್ಯಾಂಡ್‌ಗಳಿಗೆ ಮಾತ್ರ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಉತ್ತರಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನೇತ್ರಾಣಿ ದ್ವೀಪವಿದ್ದು, ಪ್ರವಾಸಿಗರು ಈ ಐಲ್ಯಾಂಡ್ ಸುತ್ತಮುತ್ತಲೂ ತಿರುಗಾಡಿ, ಸ್ಕೂಬಾ ಡೈವ್ ನಡೆಸಿ ತೆರಳುತ್ತಾರೆ. ಭಟ್ಕಳದ ಕಿರಿಕುಂದ, ಹೊನ್ನಾವರದ ಬಸವರಾಯ ದುರ್ಗ, ಖಾಸಗಿ ವ್ಯಕ್ತಿಯೊಬ್ಬರಿಗೆ ಸೇರಿದ ಕಾರವಾರದ ನರಸಿಂಹಗಢ ದ್ವೀಪವಿದೆ, ಆಗಾಗ್ಗೆ ಕೊಂಚ ಪ್ರಮಾಣದಲ್ಲಿ ಜನರು ಇಲ್ಲಿಗೆ ಭೇಟಿ ನೀಡುವರು.
ನರಸಿಂಹಗಢ ದ್ವೀಪದಲ್ಲಿ ಪ್ರತಿವರ್ಷ ನರಸಿಂಹ ದೇವರ ಜಾತ್ರೆ ನಡೆಯುತ್ತಿದೆ. ಅಂದು ಸಾವಿರಾರು ಸಂಖ್ಯೆಯಲ್ಲಿ ಜನರು ಬೋಟ್ ಮೂಲಕ ಸಮುದ್ರದದಲ್ಲಿರುವ ದ್ವೀಪಕ್ಕೆ ತೆರಳಿ ದೇವರ ದರ್ಶನ ಮಾಡಿ, ಹರಕೆ ಸಲ್ಲಿಸಿ ಹಿಂತಿರುಗುತ್ತಾರೆ. ಇನ್ನು ಅಂಜುದೀವ್ ಎಂಬ ದ್ವೀಪ ನೌಕಪಡೆ ಪಾಲಾಗಿದೆ. ಇಲ್ಲಿ ನೌಕಾಪಡೆಯವರನ್ನು ಹೊರತುಪಡಿಸಿ ಇತರರಿಗೆ ಯಾರಿಗೂ ಹೋಗಲು ಅನುಮತಿ ಇಲ್ಲ.
ಸ್ಥಳೀಯರಿಂದ ಕರೆಯಲ್ಪಡುವ ಸನ್ಯಾಸಿ ಗುಂಜ, ಮಿನಿಸ್ಟ್ರಿ ಆಫ್ ಶಿಪ್ಪಿಂಗ್‌ಗೆ ಸೇರಿದ ಲೈಟ್‌ಹೌಸ್ ಸೇರಿದಂತೆ ಹತ್ತಾರು ಐಲ್ಯಾಂಡ್‌ಗಳು ಕಾರವಾರದಲ್ಲಿವೆ. ಇಲ್ಲಿಗೆ ತೆರಳಲು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು ಹೊರತು ನೇರವಾಗಿ ತೆರಳಲು ಸಾಧ್ಯವಿಲ್ಲ. ಈ ಐಲ್ಯಾಂಡ್‌ಗಳು ಕೇಂದ್ರ ಸರಕಾರದ ಅಧೀನದಲ್ಲಿದ್ದು, ರಾಜ್ಯ ಸರಕಾರ ಮನಸ್ಸು ಮಾಡಿದಲ್ಲಿ ಕೇಂದ್ರದ ಅನುಮತಿ ಪಡೆದು ಈ ಐಲ್ಯಾಂಡ್‌ಗಳನ್ನು ಅಭಿವೃದ್ಧಿಪಡಿಸಿ ಪ್ರವಾಸೋದ್ಯಮ ಕೇಂದ್ರಗಳಾಗಿ ಬೆಳೆಸಬಹುದಾಗಿದೆ ಎನ್ನುತ್ತಾರೆ ಸ್ಥಳೀಯರು.
ಲೈಟ್ ಹೌಸ್ ದ್ವೀಪ: ಪ್ರವಾಸಿಗ ಜಯಂತ್ ಈಟಿವಿ ಭಾರತದ ಜೊತೆ ಮಾತನಾಡಿ, ಕಾರವಾರ ನಗರದಿಂದ ಸಮುದ್ರ ಮಾರ್ಗವಾಗಿ 15ರಿಂದ 18 ಕಿ.ಮೀ. ದೂರ ಸಾಗಿದ್ದಲ್ಲಿ ಮಿನಿಸ್ಟ್ರಿ ಆಫ್ ಶಿಪ್ಪಿಂಗ್‌ಗೆ ಸೇರಿರುವ ಲೈಟ್ ಹೌಸ್ ದ್ವೀಪ ಮನಮೋಹಕವಾಗಿದೆ. ಸಮುದ್ರ ಮಾರ್ಗದಲ್ಲಿ ಸಾಗುವ ಬೋಟ್‌ಗಳಿಗೆ ಮಾರ್ಗದರ್ಶನ ಮಾಡಲು ಇಲ್ಲಿ ಬ್ರಿಟಿಷರ ಕಾಲದಲ್ಲೇ ಲೈಟ್ ಹೌಸ್ ನಿರ್ಮಾಣ ಮಾಡಲಾಗಿದೆ. ಇದಲ್ಲದೇ ಇಲ್ಲಿ ಬ್ರಿಟೀಷರ ಕಾಲದಲ್ಲಿ ತಂದಿರಿಸಿರುವ ದೊಡ್ಡ ಫಿರಂಗಿಯನ್ನು ಸಹ ಪ್ರವಾಸಿಗರು ನೋಡಬಹುದು.
ಕಾರವಾರದ ಲೈಟ್ ಹೌಸ್ ಮಾತ್ರ ಅಷ್ಟೇ ಆಲ್ಲದೇ ತದಡಿ, ಹೊನ್ನಾವರ, ಭಟ್ಕಳದ ಲೈಟ್ ಹೌಸ್ ಕೂಡ ಬ್ರಿಟಿಷರಿಂದ ನಿರ್ಮಾಣವಾಗಿವೆ. ಮುಂಬೈಯಲ್ಲಿ ಉಗ್ರಗಾಮಿಗಳ ದಾಳಿಯ ಬಳಿಕ ಈ ಲೈಟ್ ಹೌಸ್‌ಗಳನ್ನು ಮತ್ತಷ್ಟು ಬಲಯುತಗೊಳಿಸಲಾಗಿದೆ. ಯಾವುದೇ ವಿದೇಶಿ ದ್ವೀಪಗಳಿಗೆ ಯಾವುದಕ್ಕೂ ಕಡಿಮೆಯಿಲ್ಲದಂತಹ ಪ್ರಕೃತಿ ಸೌಂದರ್ಯವನ್ನು ಇಲ್ಲಿ ಸವಿಯಬಹುದು.
ವಿವಿಧ ಸಮುದ್ರ ಜೀವಿಗಳು ಕೂಡ ಇಲ್ಲಿ ಕಂಡುಬರುತ್ತವೆ, ಆದರೆ ಈ ದ್ವೀಪಗಳ ಸ್ಥಿತಿ ಶೋಚನೀಯ, ದ್ವೀಪದ ಮೇಲೆ ಹೋಗಲು ಸಮರ್ಪಕ ರಸ್ತೆಯಿಲ್ಲ, ಅಲ್ಲಿ ಇಬ್ಬರು ಸಿಬ್ಬಂದಿ ತಂಗಲು ಸರಿಯಾದ ವಸತಿ ವ್ಯವಸ್ಥೆಯಿಲ್ಲ, ಪ್ರವಾಸಿಗರು ಯಾರಾದ್ರೂ ಭೇಟಿ ನೀಡಿದ್ದಲ್ಲಿ ಅಗತ್ಯ ಯಾವುದೇ ಸೌಲಭ್ಯ ಇಲ್ಲಿಲ್ಲ. ಸಿಬ್ಬಂದಿ ಮನೆ ನೋಡಿದ್ರೆ ಭೂತ ಬಂಗಲೆಯಂತೆ ಕಾಣುತ್ತಿವೆ. ತಿಂಗಳ ಕಾಲ ಇಬ್ಬರೇ ಸಿಬ್ಬಂದಿ ಇಲ್ಲಿದ್ದು, ಈ ದ್ವೀಪದ ಸೌಂದರ್ಯವನ್ನು ನೋಡಬಹುದು.
ಈ ದ್ವೀಪಗಳು ಅತ್ಯುತ್ತಮ ಪ್ರವಾಸಿ ಕೇಂದ್ರ ಆಗುವ ಸಾಧ್ಯತೆಗಳಿವೆ. ರಾಜ್ಯ ಸರಕಾರ ಕೇಂದ್ರ ಸರಕಾರದ ಅನುಮತಿ ಪಡೆದು ಈ ದ್ವೀಪಗಳನ್ನು ಅಭಿವೃದ್ಧಿಪಡಿಸಿದ್ದಲ್ಲಿ ಜನರು ವಿದೇಶಿಗಳಿಗೆ ಹೋಗುವ ಬದಲು ಉತ್ತರಕನ್ನಡ ಜಿಲ್ಲೆಯ ನೈಸರ್ಗಿಕ ದತ್ತ ದ್ವೀಪಗಳಿಗೆ ತೆರಳಿ ಆನಂದ ಕ್ಷಣಗಳನ್ನು ಕಳೆಯಬಹುದಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಇದೀಗ ಲೈಟ್ ಹೌಸ್ ಬಳಿ ಪ್ರವಾಸಿಗರ ಭೇಟಿ ನಿಷೇಧ ಎಂಬ ಬೋರ್ಡ್ ಹಾಕಲಾಗಿದೆ. ಯಾರು ಹಾಕಿರುವರು ಎನ್ನುವುದು ಸ್ಪಷ್ಟತೆ ಇಲ್ಲ. ಆದರೆ ಇದರಿಂದ ಪ್ರವಾಸೋದ್ಯಮ ಕ್ಕೆ ಹೊಡೆತ ಬೀಳಲಿದೆ ಎಂದು ಸ್ಥಳೀಯರು ಹೇಳುತ್ತಾರೆ. ಒಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿ ಸಮುದ್ರದಲ್ಲಿ ಸಾಕಷ್ಟು ದ್ವೀಪಗಳಿವೆ. ರಾಜ್ಯ ಹಾಗೂ ಕೇಂದ್ರ ಸರಕಾರ ಜಂಟಿಯಾಗಿ ಈ ದ್ವೀಪಗಳನ್ನು ಅಭಿವೃದ್ಧಿಪಡಿಸಿದಲ್ಲಿ ಜಿಲ್ಲೆಯ ಅತ್ಯುತ್ತಮ ಪ್ರವಾಸಿ ಕೇಂದ್ರ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರವಾಸಿ ಪ್ರಿಯರು ವಿದೇಶಗಳಿಗೆ ಮುಖ ಮಾಡುವ ಬದಲು ಉತ್ತರಕನ್ನಡ ಜಿಲ್ಲೆಯ ವ್ಯಾಪ್ತಿ ಸಮುದ್ರದಲ್ಲಿರುವ ದ್ವೀಪಗಳಲ್ಲಿ ಆನಂದ ಕ್ಷಣಗಳನ್ನು ಕಳೆಯಬಹುದಾಗಿದೆ.
ಇದನ್ನೂಓದಿ:ರಾಮ ಮಂದಿರದ ಕಲ್ಲು, ರಾಮಲಲ್ಲಾ ವಿಗ್ರಹದ ಶಿಲೆ ಆಯ್ಕೆ ಮಾಡಿದ್ದೇ ಕೋಲಾರ ವಿಜ್ಞಾನಿ!