ಶಿವಮೊಗ್ಗ: ಧಾರಾಕಾರ ಮಳೆಯಿಂದ ರಸ್ತೆ ಮತ್ತು ರೈಲು ಸಂಚಾರಕ್ಕೆ ಆಗಾಗ ಅಡಚಣೆ ಉಂಟಾಗುತ್ತಿದೆ. ಹೊಸನಗರ ತಾಲೂಕು ಅರಸಾಳು ರೈಲು ನಿಲ್ದಾಣದ ಬಳಿ ಹಳಿ ಮೇಲೆ ಮರ ಹಾಗೂ ವಿದ್ಯುತ್ ತಂತಿಗಳು ಬಿದ್ದ ಪರಿಣಾಮ ಶುಕ್ರವಾರ ಕೆಲಕಾಲ ಈ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರ ತೆರವು ಮಾಡಿದ ಬಳಿಕ ಮತ್ತೆ ರೈಲು ಸಂಚಾರ ಆರಂಭವಾಗಿದೆ.
ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ರಾತ್ರಿ 8 ಗಂಟೆಗೆ ತಾಳಗುಪ್ಪ ತಲುಪಬೇಕಿತ್ತು. ಆದರೆ ರಾತ್ರಿ 10 ಗಂಟೆಯಾದರು ರೈಲು ಅರಸಾಳು ರೈಲು ನಿಲ್ದಾಣದಲ್ಲಿಯೇ ನಿಂತಿತ್ತು. ಮಳೆಯಿಂದಾಗಿ ಮರ ರೈಲು ಹಳಿಗಳ ಮೇಲೆ ಬಿದ್ದಿದೆ. ಜೊತೆಗೆ ವಿದ್ಯುತ್ ತಂತಿಗಳು ಸಹ ಬಿದ್ದಿವೆ. ಸ್ಥಳಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದು ಮರ ತೆರವು ಮಾಡುವ ಕಾರ್ಯಕ್ಕೆ ಮುಂದಾಗಿದ್ದರು. ಮಳೆಯಿಂದ ಮರ ತೆರವು ಕಾರ್ಯಕ್ಕೆ ಅಡಚಣೆ ಉಂಟಾಗಿತ್ತು. ರಾತ್ರಿ 11ರ ಬಳಿಕ ತೆರವು ಕಾರ್ಯಾಚರಣೆ ಮುಗಿದಿದ್ದು, ಆ ನಂತರ ರೈಲು ಸಂಚಾರ ಆರಂಭವಾಗಿದೆ.
ಕಳೆದ ವಾರದ ಸಹ ಬೆಳಗ್ಗೆ ಕುಂಸಿ ಬಳಿ ಮರ ಬಿದ್ದು ಇದೇ ಇಂಟರ್ ಸಿಟಿ ರೈಲು ಸಂಚಾರಕ್ಕೆ ತಡೆ ಉಂಟಾಗಿತ್ತು. ತೆರವು ಕಾರ್ಯಾಚರಣೆ ಬಳಿಕ ಮತ್ತೆ ಸಂಚಾರ ಆರಂಭವಾಗಿತ್ತು. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ವರುಣನ ಆರ್ಭಟ ಮುಂದುವರಿದಿದ್ದು, ಅಲ್ಲಲ್ಲಿ ಅವಾಂತರಗಳು ಉಂಟಾಗುತ್ತಿವೆ.