ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳನ್ನ ನಿಯಂತ್ರಿಸಲು, ಅತಿವೇಗದ ಚಾಲನೆಯನ್ನು ಪತ್ತೆ ಹಚ್ಚುವ ಸ್ವಯಂಚಾಲಿತ ಕ್ಯಾಮರಾಗಳ ಮೂಲಕ ದಂಡ ವಿಧಿಸುವ ಕೆಲಸಕ್ಕೆ ಬೆಂಗಳೂರು ನಗರ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಾಲಕರ ಅತಿವೇಗದ ಚಾಲನೆಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತಗಳು ಹೆಚ್ಚುತ್ತಿರುವುದರಿಂದ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ವಯಂ ಚಾಲಿತವಾಗಿ ಅತಿವೇಗದ ಚಾಲನೆ ಪತ್ತೆ ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಕಳೆದ ಎರಡು ವರ್ಷಗಳ ಅಪಘಾತ ಪ್ರಕರಣಗಳ ವಿವರ:
- ವರ್ಷ - 2022
ಅಪಘಾತ ಪ್ರಕರಣಗಳು - 278
ಗಂಭೀರ ಪ್ರಕರಣಗಳು - 70
ಗಂಭೀರವಲ್ಲದ ಪ್ರಕರಣಗಳು - 208
ಮೃತರ ಸಂಖ್ಯೆ - 73 - ವರ್ಷ - 2023
ಅಪಘಾತ ಪ್ರಕರಣಗಳು - 322
ಗಂಭೀರ ಪ್ರಕರಣಗಳು - 85
ಗಂಭೀರವಲ್ಲದ ಪ್ರಕರಣಗಳು - 237
ಮೃತರ ಸಂಖ್ಯೆ - 87 - ವರ್ಷ - 2024 (ಏಪ್ರಿಲ್ 30ರ ವರೆಗೆ)
ಅಪಘಾತ ಪ್ರಕರಣಗಳು - 110
ಗಂಭೀರ ಪ್ರಕರಣಗಳು - 29
ಗಂಭೀರವಲ್ಲದ ಪ್ರಕರಣಗಳು - 81
ಮೃತರ ಸಂಖ್ಯೆ - 30
ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ 2024ರ ಏಪ್ರಿಲ್ 30ರ ವರೆಗಿನ ಅಂಕಿ ಅಂಶದ ಪ್ರಕಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ ಮತ್ತು ಅಪಘಾತಗಳಿಗೆ ಪ್ರಮುಖ ಕಾರಣ ಚಾಲಕರ ಅತಿವೇಗದ ಚಾಲನೆ ಅನ್ನೋದು ಗೊತ್ತಾಗಿದೆ. ಈ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಅತಿವೇಗದ ಚಾಲನೆ ಪತ್ತೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾನೂನಾತ್ಮಕವಾಗಿ ನಿಗದಿಪಡಿಸಲಾಗಿರುವಂತೆ ಪ್ರತಿ ಗಂಟೆಗೆ 80 ಕಿ.ಮೀ ಗಿಂತ ವೇಗವಾಗಿ ಚಲಿಸುವ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗುವುದು ಎಂದು ಬೆಂಗಳೂರು ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: 40 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಐರಾವತ ಬಸ್ಗೆ ಬೆಂಕಿ: ಸುಟ್ಟು ಕರಕಲು - Airavat bus caught fire